Tuesday, August 16, 2022

Latest Posts

ಸದನದಲ್ಲಿ ಉದ್ಧವ್‌ ಠಾಕ್ರೆ ವಿರುದ್ಧ ಮುಖ್ಯಮಂತ್ರಿ ಶಿಂಧೆ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದ ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲಬಾರಿಗೆ ಸಿಎಂ ಸ್ಥಾನದಲ್ಲಿ ಕುಳಿತು ವಿಧಾನ ಸಭೆಯನ್ನದ್ದೇಶಿಸಿ ಮಾತನಾಡಿದ ಏಕನಾಥ ಶಿಂಧೆ “ಯಾವುದೇ ಶಾಸಕನಿಗೂ ನನ್ನನ್ನು ಬೆಂಬಲಿಸುವಂತೆ ಒತ್ತಾಯ ಮಾಡಲಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ ನನ್ನೆಡೆಗೆ ಬಂದಿದ್ದಾರೆ. ಇಲ್ಲಿಯವರೆಗೂ ವಿರೋಧ ಪಕ್ಷದವರು ಆಡಳಿತ ಸರ್ಕಾರವನ್ನು ಉರುಳಿಸಿದ ಉದಾಹಣೆಯಿದೆ. ಆದರೆ ಇದೇ ಮೊದಲಬಾರಿಗೆ ಆಡಳಿತ ಪಕ್ಷದವರೇ ವಿರೋಧ ಪಕ್ಷದತ್ತ ಹೋಗಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ಕಾರಣವಾದ ಬಂಡಾಯದ ಬಗ್ಗೆ ಮಾತನಾಡಿದ ಶಿಂಧೆ “ಸರ್ಕಾರದಲ್ಲಿ ಸಚಿವರಾಗಿದ್ದವರೂ ಸೇರಿದಂತೆ ಅನೇಕ ಶಾಸಕರು ನನ್ನೆಡೆಗೆ ಸ್ವಯಂ ಪ್ರೇರಣೆಯಿಂದ ಬಂದರು. ಇದು ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಸಿದ್ಧಾಂತಕ್ಕೆ ಮೀಸಲಾದ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅತ್ಯಂತ ದೊಡ್ಡವಿಷಯವಾಗಿದೆ. ಕೆಲವರು ತಮ್ಮ ಸಂಪರ್ಕದಲ್ಲಿ ಬಂಡಾಯ ಶಾಸಕರಿದ್ದಾರೆ ಎಂದರು. ಮೊದಲಿಗೆ 5 ಆಮೇಲೆ 10, ಕೊನೆಗೆ 20, 25ಶಾಸಕರು ಸಂಪರ್ಕವಿದೆಯೆಂದರು. ನಾನು ಅವರ ಬಳಿ ಹೆಸರು ಕೇಳಿದೆ. ಅವರ ಬಳಿ ಯಾವುದೇ ಹೆಸರಿರಲಿಲ್ಲ. ಗ್ರಹಿಕೆ ಅಥವಾ ನಿರೀಕ್ಷೆ ಏನೇ ಇರಲಿ, ಅದು ತಪ್ಪಾಗಿದೆ. ಬಂಡಾಯ ಶಾಸಕರು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ” ಎಂದು ಉದ್ಧವ್‌ ಠಾಕ್ರೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

“ಈಗ ಬಾಳಾಸಾಹೇಬ್ ಠಾಕ್ರೆ ಅವರ ನಂಬಿಕೆಗಳ ಆಧಾರದ ಮೇಲೆ ಬಿಜೆಪಿ-ಶಿವಸೇನೆ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಬಾಳಾಸಾಹೇಬರ ಸೈನಿಕರು ಸಿಎಂ ಆಗಿದ್ದಾರೆ. ಬಿಜೆಪಿಯಲ್ಲಿ 115 ಶಾಸಕರಿದ್ದು, ನನ್ನ ಬಳಿ 50 ಶಾಸಕರಿದ್ದಾರೆ. ಆದರೆ ಬಿಜೆಪಿ ದೊಡ್ಡ ಮನಸ್ಸು ಮಾಡಿ ನನಗೆ ಸಿಎಂ ಸ್ಥಾನ ನೀಡಿದೆ. ನಾನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಸಿಎಂ ಸ್ಥಾನದ ನಿರೀಕ್ಷೆ ಇರಲಿಲ್ಲ” ಎಂದಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ನಂಬರ್‌ ಗೇಮ್‌ ನಲ್ಲಿ ಶಿಂಧೆ ಪಾಸ್‌ ಆಗಿದ್ದು ಬಂಡಾಯ ಶಿವಸೇನೆ- ಬಿಜೆಪಿ ಬೆಂಬಲಿತ ರಾಹುಲ್‌ ನಾರ್ವೇಕರ್‌ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ. ನಾಳೆ ಇನ್ನೊಂದು ನಂಬರ್‌ ಗೇಮ್‌ ಅನ್ನು ಶಿಂಧೆ ಎದುರಿಸಲಿದ್ದು ವಿಶ್ವಾಸಮತಯಾಚನೆ ನಡೆಯಲಿದೆ. ಇದರಲ್ಲೂ ಶಿಂಧೆ ಪಾಸ್‌ ಆಗಲಿದ್ದಾರೆ ಎಂಬುದು ಬಹುತೇಕರ ನಿರೀಕ್ಷೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss