Wednesday, October 5, 2022

Latest Posts

ರಾಜಸ್ಥಾನದಲ್ಲಿ ದಲಿತ ಬಾಲಕನ ಮೇಲಾದ ದುರಂತಕ್ಕೆ ಕಾಂಗ್ರೆಸ್ ಏಕೆ ಮೌನವಾಗಿದೆ: ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್, ಬೆಂಗಳೂರು:
“ರಾಜಸ್ಥಾನದಲ್ಲಿ ನೀರನ್ನು ಮುಟ್ಟಿದ ಬಾಲಕನನ್ನು ಅಧ್ಯಾಪಕನೊಬ್ಬ ತೀವ್ರವಾಗಿ ಥಳಿಸಿದ್ದು ಹಾಗೂ ಚಿಕಿತ್ಸೆ ಫಲಕಾರಿ ಆಗದೆ ಬಾಲಕ ಮೃತಪಟ್ಟಿರುವುದು ಹೃದಯವಿದ್ರಾವಕ ಕೃತ್ಯ, ಈ ಕುರಿತು ಕಾಂಗ್ರೆಸ್‍ನವರು ದೇಶದಲ್ಲಿ ಒಂದೇ ಒಂದು ಹೇಳಿಕೆ ಕೊಡದಿರುವುದು ಅವರ ದಲಿತವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ” ಹೀಗೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಣ್ಣಪುಟ್ಟ ಘಟನೆಗೆ ತಕ್ಷಣ ಪ್ರತಿಕ್ರಿಯೆ ಕೊಡುವ ಕಾಂಗ್ರೆಸ್ ಮುಖಂಡರ ನಾಲಿಗೆ ಬಿದ್ದುಹೋಗಿದೆಯೇ? ನಾನು ಸದಾ ದಲಿತರ ಪರ ಎನ್ನುವ ನಾಯಕರು ಇವತ್ತು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ರಾಜಸ್ಥಾನದಲ್ಲಿ ಶಾಸಕರು ಸೇರಿದಂತೆ ಅನೇಕ ಕೌನ್ಸಿಲರ್‍ಗಳು ಹಾಗೂ ದಲಿತ ಮುಖಂಡರು ಇದೀಗ ರಾಜೀನಾಮೆ ಪರ್ವ ಆರಂಭಿಸಿದ್ದಾರೆ ಎಂದ ಅವರು, ದಲಿತರಿಗೂ ಕಾಂಗ್ರೆಸ್ ಪಕ್ಷದ ಗೋಸುಂಬೆ ರಾಜಕೀಯವು ಅರ್ಥವಾಗಿದೆ ಎಂದು ನುಡಿದರು.
ನಾಳೆ ಜಿಲ್ಲೆಗಳಲ್ಲಿ ಪ್ರತಿಭಟನಾ ಪ್ರದರ್ಶನ
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀನಾಮೆಗೆ ಆಗ್ರಹಿಸಿ ನಾಳೆ 11 ಗಂಟೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಕಟಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!