September 28, 2026
Monday, September 28, 2026
spot_img

ಕೊಹ್ಲಿ, ಗಿಲ್ ಸೆಂಚುರಿ ನಡುವೆಯೂ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಕುಲ್ದೀಪ್ ಯಾದವ್ ಪಾಲಾಗಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಸಮರದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತೀಯ ನಾಯಕ ಶುಭ್​ಮನ್ ಗಿಲ್ ನಿರ್ಧಾರಕ್ಕೆ ಸವಾಲಾಗಿ ನಿಂತ ವಿಂಡೀಸ್ ಬ್ಯಾಟರ್‌ಗಳು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು.

ಈ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ನಾಯಕ ಶುಭ್​ಮನ್ ಗಿಲ್ (110) ಹಾಗೂ ರನ್ ಮಷೀನ್ ವಿರಾಟ್ ಕೊಹ್ಲಿ (139*) ಭರ್ಜರಿ ಶತಕಗಳ ಮೂಲಕ ಸಾಥ್ ನೀಡಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಕೇವಲ 41.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ, 8 ವಿಕೆಟ್‌ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.

‘ಮ್ಯಾನ್ ಆಫ್ ದಿ ಮ್ಯಾಚ್’

ಮೇಲ್ನೋಟಕ್ಕೆ 139 ರನ್ ಬಾರಿಸಿ ಅಜೇಯರಾಗಿ ಉಳಿದ ವಿರಾಟ್ ಕೊಹ್ಲಿ ಗೆಲುವಿನ ನಾಯಕನಾಗಿ ಕಂಡರೂ, ಅಸಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ದಕ್ಕಿದ್ದು ಮಾತ್ರ ಸ್ಪಿನ್ನರ್ ಕುಲ್ದೀಪ್ ಯಾದವ್‌ಗೆ. ಇಬ್ಬರು ಬ್ಯಾಟರ್‌ಗಳು ಶತಕ ಸಿಡಿಸಿದ ಪಂದ್ಯದಲ್ಲಿ ಬೌಲರ್‌ಗೆ ಈ ಗೌರವ ಸಿಕ್ಕಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಪ್ರಶಸ್ತಿ ಕುಲ್ದೀಪ್ ಪಾಲಾಗಿದ್ದೇಕೆ?

ತಿರುವನಂತಪುರಂ ಪಿಚ್ ಸಂಪೂರ್ಣವಾಗಿ ಬ್ಯಾಟರ್‌ಗಳಿಗೆ ಅನುಕೂಲಕರವಾಗಿತ್ತು. ವಿಂಡೀಸ್ ಆಟಗಾರರು ಸುಲಭವಾಗಿ ರನ್ ಕಲೆಹಾಕುತ್ತಾ, ಒಂದು ಹಂತದಲ್ಲಿ 350ಕ್ಕೂ ಅಧಿಕ ರನ್ ಗಳಿಸುವ ಮುನ್ಸೂಚನೆ ನೀಡಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕುಲ್ದೀಪ್ ತಮ್ಮ 10 ಓವರ್‌ಗಳಲ್ಲಿ ಕೇವಲ 40 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿ ಎದುರಾಳಿಗಳನ್ನು 295 ರನ್‌ಗಳಿಗೆ ಕಟ್ಟಿಹಾಕಿದರು.

ಶತಕ ಬಾರಿಸಿ ಭಾರತೀಯ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿದ್ದ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಜಸ್ಟಿನ್ ಗ್ರೀವ್ಸ್ ಅವರನ್ನು ಔಟ್ ಮಾಡಿದ್ದು ಇದೇ ಕುಲ್ದೀಪ್. ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿ, ವಿಂಡೀಸ್ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.

ಕ್ರಿಕೆಟ್‌ನಲ್ಲಿ ಕೇವಲ ರನ್ ಅಥವಾ ವಿಕೆಟ್‌ಗಳ ಸಂಖ್ಯೆ ಮುಖ್ಯವಲ್ಲ, ಪಂದ್ಯದ ಪರಿಸ್ಥಿತಿಗೆ ಆಟಗಾರ ನೀಡಿದ ಕೊಡುಗೆ ಮುಖ್ಯ. ಕೊಹ್ಲಿ ಮತ್ತು ಗಿಲ್ ಬ್ಯಾಟಿಂಗ್ ಮಾಡುವಾಗ ಪಿಚ್ ತೀರಾ ಸರಳವಾಗಿತ್ತು. ಆದರೆ ವಿಂಡೀಸ್ ಬ್ಯಾಟಿಂಗ್ ವೇಳೆ ಬೌಲರ್‌ಗಳಿಗೆ ಯಾವುದೇ ನೆರವಿಲ್ಲದಿದ್ದರೂ, ಕುಲ್ದೀಪ್ ತಮ್ಮ ಚಾಣಾಕ್ಷ ಬೌಲಿಂಗ್ ಸ್ಪೆಲ್‌ನಿಂದ ಪಂದ್ಯದ ದಿಕ್ಕನ್ನೇ ಬದಲಿಸಿದರು.

ಇದೇ ಕಾರಣಕ್ಕೆ, ಎದುರಾಳಿಯ ಬೃಹತ್ ಮೊತ್ತಕ್ಕೆ ತಡೆಹಾಕಿ ಭಾರತದ ಗೆಲುವಿಗೆ ಬಲವಾದ ಅಡಿಪಾಯ ಹಾಕಿಕೊಟ್ಟ ಕುಲ್ದೀಪ್ ಯಾದವ್ ಅವರಿಗೆ ‘ಮ್ಯಾನ್ ಆಫ್ ದಿ ಮ್ಯಾಚ್’ ಗೌರವ ಒಲಿದುಬಂದಿದೆ.

Must Read