ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಹುನಿರೀಕ್ಷಿತ ಕಾಂತಾರ ಸಿನಿಮಾ ಬಿಡುಗಡೆಗೊಂಡು ವಿಶ್ವದೆಲ್ಲೆಡೆ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದು, ಎಲ್ಲರು ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ .
ಇದರ ನಡುವೆ ಮೇಕಿಂಗ್ ಸಮಯದ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಸಿನಿಮಾ ತಂಡದಿಂದ ಹೊರ ಬರುತ್ತಿದೆ.
ಹೌದು, ಇದೀಗ ಸಿನಿಮಾ ಮಾಡುವ ಮುನ್ನ ನಟ ರಿಷಬ್ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು ಎಂಬ ವಿಚಾರ ಹೊರ ಬಿದ್ದಿದೆ. ಹಾಗಾದ್ರೆ ಯಾಕೆ ಅವರು ಹೋದ್ರು? ಎಂಬ ಸಂಗತಿ ಅವರೇ ಹೇಳಿದ್ದಾರೆ.
ಕಾಂತಾರ ಸಿನಿಮಾ ದೈವ, ನಾಡು, ನುಡಿ ಆಚರಣೆಗಳನ್ನು ಒಳಗೊಂಡ ಸಿನಿಮಾ. ಇದರಲ್ಲಿ ಬಹಳಷ್ಟು ಗ್ರಾಮೀಣ ಸೊಗಡು, ಸಂಸ್ಕೃತಿಯ ಅಂಶಗಳು ಒಳಗೊಂಡಿದೆ. ಹಾಗಾಗಿ ನಟ ರಿಷಬ್ ಶೆಟ್ಟಿ ದೈವ ಪಾತ್ರಿಯಾಗಿ ನಟಿಸುವ ಮೊದಲು ಮಂಗಳೂರಿನ ಸುತ್ತಮುತ್ತಲಿನ ಕೆಲ ದೈವ ನರ್ತಕರು, ದೈವಾರಾಧಾನೆ ಮಾಡುವಂತ ಹಿರಿಯರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಹೇಗೆ ನಡೆದುಕೊಳ್ಳಬೇಕು ಎಂದು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಒಂದು ಭಾಗದ ಜನರು ಮಾತ್ರ ಇದನ್ನು ಮಾಡುತ್ತಾರೆ. ನಾವು ಸಿನಿಮಾಗೆ ಮಾಡುವಾಗ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಿತ್ತು . ಅದಕ್ಕಾಗಿ ಅಲ್ಲಿಯವರು ಧರ್ಮಸ್ಥಳಕ್ಕೆ ಹೋಗು, ಮಂಜುನಾಥ ಸ್ವಾಮಿ ಹತ್ತಿರ ಪ್ರಾರ್ಥಿಸು, ಯಾಕೆಂದರೆ ಇದರ ಮೂಲ ಎಲ್ಲಾ ಅಲ್ಲೇ ಇರೋದು ಎಂದು ದೈವನರ್ತಕರು ರಿಷಬ್ ಶೆಟ್ಟಿಗೆ ಸಲಹೆ ಕೊಟ್ಟಿದ್ದರು.
ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ವಿರೇಂದ್ರ ಹೆಗ್ಗಡೆಯವರ ಬಳಿ ಈ ರೀತಿ ಸಿನಿಮಾ ಮಾಡ್ತಾ ಇದ್ದೇನೆ, ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೇಳಿದಾಗ ಅವರು ಏನೂ ಆಗಲ್ಲ, ಇಲ್ಲಿಗೆ ಬಂದಿದ್ದೀಯಲ್ಲ ಒಳ್ಳೆಯದಾಗುತ್ತೆ ಹೋಗು ಎಂದಿದ್ದರು ಎನ್ನುವುದನ್ನು ರಿಷಬ್ ನೆನಪಿಸಿಕೊಂಡಿದ್ದಾರೆ.