August 30, 2026
Sunday, August 30, 2026
spot_img

ನೀರಲ್ಲಿ ಕೈ ಹಾಕಿದ್ರೆ ಬೆರಳು ಸುಕ್ಕು ಗಟ್ಟೋದು ಯಾಕೆ? ಇದು ಮ್ಯಾಜಿಕ್ ಅಲ್ಲ, ಬಾಡಿ ಡಿಫೆನ್ಸ್!

ಬಟ್ಟೆ ಒಗೆಯುವಾಗ, ಪಾತ್ರೆ ತೊಳೆಯುವಾಗ, ಸ್ವಿಮ್ಮಿಂಗ್ ಪೂಲ್ ನಲ್ಲಿ ಆಡುವಾಗ ಅಥವಾ ಜಾಸ್ತಿ ಹೊತ್ತು ಸ್ನಾನ ಮಾಡುವಾಗ ಎಂದಾದರೂ ನಿಮ್ಮ ಬೆರಳುಗಳನ್ನು ಗಮನಿಸಿದ್ದೀರಾ? ಬೆರಳಿನ ತುದಿಯೆಲ್ಲಾ ಯಾವುದೋ ನೂರು ವರುಷದ ಅಜ್ಜ-ಅಜ್ಜಿಯ ಚರ್ಮದ ತರಹ ಸುಕ್ಕು ಸುಕ್ಕಗಾಗಿಬಿಟ್ಟಿರುತ್ತೆ. ಆದರೆ, ಇದು ನಿಮ್ಮ ದೇಹ ಮಾಡೋ ಒಂದು ಮ್ಯಾಜಿಕ್ ಅಷ್ಟೇ.

ಸಾಮಾನ್ಯವಾಗಿ ನಾವೆಲ್ಲಾ ಅಂದುಕೊಳ್ಳೋದು ನೀರು ಚರ್ಮದೊಳಗೆ ನುಗ್ಗಿ, ಬೆರಳು ಉಬ್ಬಿಕೊಂಡು ಹೀಗಾಗುತ್ತೆ ಅಂತ. ಆದರೆ ಅಸಲಿ ವಿಷಯ ಬೇರೆಯೇ ಇದೆ.

ನಮ್ಮ ಬೆರಳುಗಳ ಚರ್ಮದ ಅಡಿಯಲ್ಲಿ ಸಣ್ಣ ಸಣ್ಣ ರಕ್ತನಾಳಗಳು ಇರುತ್ತವೆ. ನಾವು ನೀರಲ್ಲಿ ತುಂಬಾ ಹೊತ್ತು ಕೈ ಇಟ್ಟಾಗ, ತಕ್ಷಣವೇ ಮಿದುಳು ಬೆರಳಲ್ಲಿರೋ ರಕ್ತನಾಳಗಳಿಗೆ ಮೆಸೇಜ್ ಕಳಿಸಿ ಅವುಗಳನ್ನು ಚೂರು ಸಂಕುಚಿತಗೊಳಿಸುತ್ತೆ. ರಕ್ತನಾಳಗಳು ಸಣ್ಣದಾದ ತಕ್ಷಣ, ಅದರ ಮೇಲಿರುವ ಚರ್ಮ ಒಳಗಡೆ ಎಳೆಯಲ್ಪಟ್ಟು ಈ ರೀತಿ ಸುಕ್ಕುಗಳು ಬೀಳುತ್ತವೆ.

ಇದ್ರಿಂದ ಏನು ಲಾಭ?

ಗಾಡಿಯ ಟೈರ್‌ಗಳ ಮೇಲೆ ಗೆರೆಗಳಿರುತ್ತವೆ, ಯಾಕೆ ಗೊತ್ತಾ? ಮಳೆ ನೀರಲ್ಲಿ ಗಾಡಿ ಸ್ಕಿಡ್ ಆಗದೆ ರಸ್ತೆ ಹಿಡಿದುಕೊಳ್ಳಲಿ ಅಂತ. ಥೇಟ್ ಅದೇ ತರಹ, ನೀರಲ್ಲಿ ಇರುವಾಗ ನಮ್ಮ ಕೈಯಿಂದ ಸೋಪು, ಪಾತ್ರೆ ಅಥವಾ ಯಾವುದೇ ವಸ್ತು ಜಾರಿ ಹೋಗಬಾರದು ಅಂತ ನಿಸರ್ಗ ನಮಗೆ ಕೊಟ್ಟಿರೋ ‘ನ್ಯಾಚುರಲ್ ಗ್ರಿಪ್’ ಇದು. ಸುಕ್ಕು ಬಿದ್ದಾಗ ನೀರಲ್ಲಿ ಮುಳುಗಿರೋ ವಸ್ತುಗಳನ್ನು ನಾವು ಗಟ್ಟಿಯಾಗಿ ಹಿಡಿದುಕೊಳ್ಳಬಹುದು.

ನೀರಿಂದ ಕೈ ಹೊರಗೆ ತೆಗೆದು ಒಣಗಿಸಿದ ಹತ್ತು-ಹದಿನೈದು ನಿಮಿಷಕ್ಕೆ ಬೆರಳು ಮತ್ತೆ ಮೊದಲಿನಂತೆ ನಯವಾಗಿಬಿಡುತ್ತವೆ. ಸೋ, ಇನ್ನೊಮ್ಮೆ ಬೆರಳು ಮುಡಚಿಕೊಂಡರೆ ಭಯಪಡಬೇಡಿ. ನಮ್ ಬಾಡಿ ನಮಗೋಸ್ಕರ ರೆಡಿ ಮಾಡಿರೋ ‘ನ್ಯಾಚುರಲ್ ಗ್ರಿಪ್’ ಅಂತ ಜಸ್ಟ್ ಎಂಜಾಯ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !