ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬ ಬಳಕೆ ವಿಚಾರದಲ್ಲಿ ಯಾಕೆ ರಾಜಕೀಯ ಮಾಡುತ್ತೀರಿ? ಎಂದು ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ನಟ ಪ್ರಕಾಶ್ ರಾಜ್ ಕೆಂಡಕಾರಿದ್ದರು. ಈಗ ಪ್ರಕಾಶ್ ರಾಜ್ಗೆ ಪವನ್ ಕಲ್ಯಾಣ್ ಸ್ಟ್ರಾಂಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತಾಡಿದ ಡಿಸಿಎಂ ಪವನ್ ಕಲ್ಯಾಣ್, ಇತ್ತೀಚೆಗೆ ಪ್ರಕಾಶ್ ರಾಜ್ ತಿರುಪತಿ ಲಡ್ಡು ವಿಚಾರದ ಬಗ್ಗೆ ಮಾತಾಡಿದ್ದಾರೆ. ನನ್ನ ಧರ್ಮಕ್ಕೆ ಅನ್ಯಾಯವಾದ್ರೆ ಮಾತನಾಡುವುದರಲ್ಲಿ ತಪ್ಪೇನಿದೆ? ನಾನು ಯಾವ ಧರ್ಮದ ವಿರುದ್ಧವೂ ಇಲ್ಲ. ಇದನ್ನು ಪ್ರಕಾಶ್ ರಾಜ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪವನ್ ತಿರುಗೇಟು ನೀಡಿದ್ರು.
ನನಗೆ ಪ್ರಕಾಶ್ ರಾಜ್ ಅವರ ಬಗ್ಗೆ ಅಪಾರವಾದ ಗೌರವ ಇದೆ. ಜಾತ್ಯತೀತತೆ ಬಗ್ಗೆ ಮಾತಾಡೋ ಜನ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳು ಬಹಳ ನೋವನ್ನು ಅನುಭವಿಸುತ್ತಿದ್ದೇವೆ. ಯಾರಾದ್ರೂ ನಮ್ಮ ಬಗ್ಗೆ ಮಾತಾಡೋ ಮುನ್ನ ನೂರು ಸಲ ಯೋಚಿಸಬೇಕು. ನಮ್ಮ ಭಾವನೆಗಳಿಗೆ ಧಕ್ಕೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನೇ ಇರುವುದಿಲ್ಲ ಎಂದರು.
ಈ ಹಿಂದೆ ಇದರ ಬಗ್ಗೆ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್, ಡಿಸಿಎಂ ಪವನ್ ಕಲ್ಯಾಣ್ ಅವರೇ ಆಂಧ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಆದಷ್ಟು ಬೇಗ ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಕೊಡಿ. ಈಗಾಗಲೇ ಹಲವು ಕೋಮು ಗಲಭೆಗಳು ದೇಶದಲ್ಲಿ ನಡೆಯುತ್ತಿದೆ. ಇದಕ್ಕೆ ನೀವು ಕೋಮು ಬಣ್ಣ ಕಟ್ಟಿ ದೇಶಾದ್ಯಂತ ಗಲಭೆ ಎಬ್ಬಿಸಬೇಡಿ ಎಂದು ಹೇಳಿದ್ದರು.