‘ಹಸಿರು ಹೈಡ್ರೋಜನ್‌ʼ ಉತ್ಪಾದನೆಗೆ ಭಾರತ ಸಾವಿರಾರು ಕೋಟಿ ಹೂಡಿಕೆ ಮಾಡುತ್ತಿರೋದೇಕೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಯಾವುದೇ ದೇಶ ತನ್ನ ಮೂಲ ಅಗತ್ಯವಾದ ಅಡುಗೆ ಬೇಯಿಸೋದರಿಂದ ಹಿಡಿದು, ಸಾರಿಗೆ, ಕೈಗಾರಿಕೆ ಎಂದೆಲ್ಲ ಚಟುವಟಿಕೆ ವಿಸ್ತರಿಸಿ ಅಭಿವೃದ್ಧಿ ಪಥದಲ್ಲಿ ಸಾಗುವುದಕ್ಕೆ ಮುಖ್ಯವಾಗಿ ಬೇಕಿರುವುದು ಇಂಧನ ಅಥವಾ ಶಕ್ತಿ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾಲಿನ್ಯಕಾರಕ ಹಾಗೂ ಮುಗಿದುಹೋಗುವ ಪಳೆಯುಳಿಕೆ ಮೂಲಗಳನ್ನೇ ಭಾರತವೂ ಸೇರಿದಂತೆ ಜಗತ್ತು ಹೆಚ್ಚಾಗಿ ಆಶ್ರಯಿಸಿದೆ. ಭಾರತದ ಪಾಲಿಗಂತೂ ಈ ಇಂಧನಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿರುವುದರಿಂದ ಪರ್ಯಾಯ ಹುಡುಕಿಕೊಳ್ಳಲೇಬೇಕಾದ ಒತ್ತಡವಿದೆ. ಸೌರ, ಪವನ ಇತ್ಯಾದಿ ನವೀಕೃತ ಶಕ್ತಿಗಳ ಅಭಿವೃದ್ಧಿ ಜತೆಯಲ್ಲೇ ಭಾರತವು ಬಹಳ ವಿಶ್ವಾಸ ಇಟ್ಟಿರುವ ಇನ್ನೊಂದು ಮೂಲವೆಂದರೆ ಹಸಿರು ಹೈಡ್ರೋಜನ್..
ಲಭ್ಯವಿರುವ ಮಾಹಿತಿಯ ಪ್ರಕಾರ ಹಸಿರು ಹೈಡ್ರೋಜನ್‌ ಉತ್ಪಾದನೆಗೆ ಸುಮಾರು 18000 ಕೋಟಿ ರೂ.ಗಳಷ್ಟು ವೆಚ್ಚದಲ್ಲಿ ಪ್ರೋತ್ಸಾಹಕ ಯೋಜನೆಯನ್ನು ಭಾರತ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ನೀವು ತಿಳಿಯಬೇಕಿರೋ ಕೆಲ ಮಾಹಿತಿಗಳು ಇಲ್ಲಿವೆ.

ಏನಿದು ಹಸಿರು ಹೈಡ್ರೋಜನ್ ?
ಹೈಡ್ರೋಜನ್, ವಿದ್ಯುಚ್ಛಕ್ತಿಯಂತೆ, ಮತ್ತೊಂದು ವಸ್ತುವಿನಿಂದ ಉತ್ಪತ್ತಿಯಾಗುವ ಶಕ್ತಿಯ ವಾಹಕವಾಗಿದೆ. ಹೈಡ್ರೋಜನ್ ಅನ್ನು ನೀರು, ಪಳೆಯುಳಿಕೆ ಇಂಧನಗಳು ಅಥವಾ ಜೀವರಾಶಿ ಸೇರಿದಂತೆ ವಿವಿಧ ಮೂಲಗಳಿಂದ ಉತ್ಪಾದಿಸಬಹುದು ಮತ್ತು ಶಕ್ತಿ ಅಥವಾ ಇಂಧನದ ಮೂಲವಾಗಿ ಬಳಸಬಹುದಾಗಿದೆ. ಅದರ ಉತ್ಪಾದನಾ ವಿಧಾನದ ಸ್ವರೂಪವನ್ನು ಅವಲಂಬಿಸಿ, ಹೈಡ್ರೋಜನ್ ಅನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ, ಬೂದು, ನೀಲಿ ಮತ್ತು ಹಸಿರು.
ನವೀಕರಿಸಬಹುದಾದ ಮೂಲಗಳಿಂದ ತಯಾರಿಸುವ ಹೈಡ್ರೋಜನ್‌ ಗೆ ʼಹಸಿರು ಹೈಡ್ರೋಜನ್‌ʼ ಎಂದು ಕರೆಯಲಾಗುತ್ತದೆ. ಇದು ಮಾಲಿನ್ಯಕಾರಕವಲ್ಲ. ಉತ್ಪಾದನೆಯ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಇಂಗಾಲವನ್ನು ಇದು ಹೊರಸೂಸುವುದಿಲ್ಲ. ಹಾಗಾಗಿ ʼಹಸಿರು ಹೈಡ್ರೋಜನ್ʼ ಭವಿಷ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದಾದ ಇಂಧನವಾಗಬಲ್ಲುದು.

 

ಹಸಿರು ಹೈಡ್ರೋಜನ್ ಉತ್ಪಾದನೆಗೆ ಭಾರತದ ಪ್ರಯತ್ನಗಳೇನು ?
ಈಗಾಗಲೇ ಹೇಳಿದ ಹಾಗೆ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವತ್ತ ಭಾರತ ಗಮನ ವಹಿಸಿದ್ದು ಈ ನಿಟ್ಟಿನಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಗೆ ಭಾರತ ವ್ಯಾಪಕವಾಗಿ ಪ್ರಯತ್ನಗಳನ್ನು ಕೈಗೊಂಡಿದೆ. 18000 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರೋತ್ಸಾಹಕ ಯೋಜನೆ ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಮತ್ತು ಇಂಧನ ವಲಯದ ವಿವಿಧ ಕಂಪನಿಗಳು ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಭಾರತವು ಈಗಾಗಲೇ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಭಾರತದ ಬಳಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ವಿಫುಲ ಅವಕಾಶಗಳಿದ್ದು ಇವುಗಳನ್ನು ಸದುಪಯೋಗಪಡಿಸಿಕೊಂಡು ಹಸಿರು ಹೈಡ್ರೋಜನ್‌ ಉತ್ಪಾದಿಸಲು ಕಾರ್ಯನಿರತವಾಗಿದೆ. 2030 ರ ವೇಳೆಗೆ ದೇಶೀಯ ಬಳಕೆಗಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಭಾರತದಲ್ಲಿ ಹಸಿರು ಹೈಡ್ರೋಜನ್‌ನ ಬೇಡಿಕೆಯು ಐದು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದ್ದು 2050 ರ ವೇಳೆಗೆ ವರ್ಷಕ್ಕೆ 28 ಮಿಲಿಯನ್ ಟನ್‌ಗಳಷ್ಟು ಏರಿಕೆಯಾಗಲಿದ್ದು ಭಾರತದ ಶಕ್ತಿ ಅಗತ್ಯದ 6 ಶೇಕಡಾದಷ್ಟನ್ನು ಪೂರೈಸಲಾಗುತ್ತದೆ ಎಂದು ರಾಷ್ಟ್ರೀಯ ಹೈಡ್ರೋಜನ್‌ ಮಿಷನ್‌ ಅಂದಾಜಿಸಿದೆ. ಅಲ್ಲದೇ ಇವು ಇಂಗಾಲವನ್ನು ಹೊರಸೂಸುವುದಿಲ್ಲವಾದ್ದರಿಂದ ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡಲು ಭಾರತದ ಪ್ರಯತ್ನಕ್ಕೆ ಕೊಡುಗೆ ನೀಡಲಿವೆ. ಭಾರತದ ಖಾಸಗಿ ಸಂಸ್ಥೆಗಳಾದ ಅದಾನಿ ಸಮೂಹ, ರಿಲಯನ್ಸ್‌ ಇಂಡಸ್ಟ್ರೀಸ್‌ ಗಳೂ ಹಸಿರು ಹೈಡ್ರೋಜನ್‌ ಉತ್ಪಾದಿಸಲು ಮತ್ತು ಪೂರೈಸಲು ಅನೇಕ ಒಪ್ಪಂದಗಳನ್ನು ಮಾಡಿಕೊಂಡಿವೆ. ಆ ಮೂಲಕ ಹಸಿರು ಹೈಡ್ರೋಜನ್‌ ಉತ್ಪಾದನೆ ಹೆಚ್ಚಿಸಿ ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವತ್ತ ಭಾರತ ವ್ಯಾಪಕವಾಗಿ ಪ್ರಯತ್ನಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!