ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಗಲಭೆ ಪ್ರಕರಣಕ್ಕೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರವೇ ಕಾರಣ ಎಂಬ ಆರೋಪಗಳ ಬೆನ್ನಲ್ಲೇ ಅತ್ತ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖವಾಣಿ ಸಾಮ್ನಾ ಚಿತ್ರದ ಬೆನ್ನಿಗೆ ನಿಂತಿದೆ.
ಮಹಾರಾಷ್ಟ್ರದ ನಾಗ್ಪುರ ಸೇರಿದಂತೆ ವಿವಿಧೆಡೆ ವ್ಯಾಪಕ ಹಿಂಸಾಚಾರ ಮತ್ತು ಗಲಭೆ ಸಂಭವಿಸಿತ್ತು. ಮಹಾರಾಷ್ಟ್ರದಲ್ಲಿರುವ ಔರಂಗಜೇಬ್ ಸಮಾಧಿಯನ್ನು ಕೆಡವಿಹಾಕುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಎರಡೂ ಕೋಮಿನ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು.
ಈ ಹಿಂಸಾಚಾರಕ್ಕೆ ಹಿಂದಿಯ ಛಾವಾ ಚಿತ್ರವೇ ಕಾರಣ ಎಂದು ಬರೇಲ್ವಿ ಪಂಥದ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಆರೋಪಿಸಿದ್ದಾರೆ. ಮಾತ್ರವಲ್ಲದೇ ಅವರು ಹಿಂದಿಯ ‘ಛಾವಾ’ ಚಿತ್ರವನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಇದೀಗ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆದಿದೆ. ನಾಗಪುರ ಹಿಂಸಾಚಾರಕ್ಕೆ ಛಾವಾ ಚಿತ್ರವನ್ನು ಸಿಎಂ ಫಡ್ನವೀಸ್ ದೂಷಿಸುವುದು ಅವರ ದುರ್ಬಲ ನೈತಿಕತೆಯ ಸಂಕೇತವಾಗಿದೆ. ರಾಜ್ಯದ ಎರಡನೇ ರಾಜಧಾನಿ ನಾಗ್ಪುರದಲ್ಲಿ ಸೋಮವಾರ ನಡೆದ ಗಲಭೆ ಪ್ರಕರಣದ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಬಿಜೆಪಿ ನೇತೃತ್ವದ ಸರ್ಕಾರ ಯೋಜಿಸುತ್ತಿದೆಯೇ ಎಂದು ಪ್ರಶ್ನಿಸಿದೆ.