ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಕೇಜ್ರಿವಾಲ್ ಬಂಧನ ಮಾಡಿದ್ದೇಕೆ?: ಇಡಿಗೆ ‘ಸುಪ್ರೀಂ’ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧನ ಮಾಡಿದ್ದೇಕೆ ಎಂದು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಪ್ರಶ್ನೆ ಮಾಡಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಮತ್ತು ಜಾರಿ ನಿರ್ದೇಶನಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ‘ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ, ನೀವು ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೊನೆಯ ಪ್ರಶ್ನೆಯೆಂದರೆ, ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವಾಗ ಅವರನ್ನು ಬಂಧಿಸಿದ್ದೇಕೆ’ ಎಂದು ಕೇಳಿದ್ದಾರೆ.

ಜೊತೆಗೆ ಕೇಜ್ರಿವಾಲ್‌ ಅವರ ಲೀಗಲ್‌ ಟೀಮ್‌ ಕೇಳಿರುವ ಕೆಲವು ಪ್ರಶ್ನೆಗಳಿಗೆ ಶುಕ್ರವಾರದ ಒಳಗಾಗಿ ಉತ್ತರ ನೀಡುವಂತೆ ತಿಳಿಸಿದೆ.ಮುಂದಿನ ವಿಚಾರಣೆ ನಡೆಯುವ ಮೇ 3 ಶುಕ್ರವಾರದಂದು ಪ್ರತಿಕ್ರಿಯೆ ನೀಡುವಂತೆ ಇಡಿಗೆ ಸೂಚಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅಪರಾಧದ ಆದಾಯದ ಕುರುಹು ಇಲ್ಲ ಮತ್ತು ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣೆಯ ಪ್ರಾರಂಭ ಮತ್ತು ಕೆಲವು ಸಮಯದ ನಂತರ ಪುನರಾವರ್ತಿತ ದೂರುಗಳ ನಡುವೆ ಇರುವ ಸಮಯದ ಅಂತರದ ಬಗ್ಗೆಯೂ ವಿವರವಾಗಿ ತಿಳಿಸುವಂತೆ ತನಿಖಾ ಸಂಸ್ಥೆಗೆ ಸೂಚನೆ ನೀಡಿದೆ

ಪ್ರಸ್ತುತ ರದ್ದಾಗಿರುವ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಅವರು ಏಪ್ರಿಲ್ 1 ರಿಂದ ತಿಹಾರ್ ಜೈಲಿನಲ್ಲಿದ್ದು, ಮೇ 7 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಏಪ್ರಿಲ್ 9 ರಂದು ದೆಹಲಿ ಹೈಕೋರ್ಟ್ ಮುಖ್ಯಮಂತ್ರಿಯ ಬಂಧನದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ತೀರ್ಪು ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!