ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯ ಕಾರಾಗೃಹದಲ್ಲಿರುವ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಮತ್ತೆ ಆಗಮಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ದರ್ಶನ್, ಭಾವಮೈದ ಹೇಮಂತ್ ಹಾಗೂ ನಟ ಧನ್ವೀರ್ ಸೇರಿ ಮೂವರು ಆಗಮಿಸಿದ್ದರು.
ಮಧ್ಯಾಹ್ನ ಬಂದ ಇವರನ್ನು ಸಂಜೆ 4 ಗಂಟೆ ಸುಮಾರಿಗೆ ಭದ್ರತಾ ಕೇಂದ್ರದಲ್ಲಿ ತಪಾಸಣೆ ಮಾಡಲಾಯಿತು. ಜೈಲಿನಲ್ಲಿರುವ ಕೈದಿ ಭೇಟಿ ಮಾಡಲು ಬಂದ ಮೂವರಿಗೂ ಆಧಾರ ಕಾರ್ಡ್ ಹಾಗೂ ಎರಡು ಬ್ಯಾಗಗಳಲ್ಲಿ ತಂದಿದ್ದ ವಸ್ತುಗಳನ್ನು ಜೈಲಿನ ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡಿ, ಸಂದರ್ಶಕರ ಕೊಠಡಿಗೆ ಕಳುಹಿಸಿದ್ದಾರೆ.
ನಟ ದರ್ಶನ್‌ಗೆ ಆತನ ಪತ್ನಿ ವಿಜಯಲಕ್ಷ್ಮಿ ಬ್ಯಾಗ್ ಕೊಟ್ಟಿದ್ದಾರೆ. ಅದರಲ್ಲಿ ಡ್ರೈ ಪ್ರೂಟ್ಸ್, ಬಿಸ್ಕೇಟ್, ಬಟ್ಟೆ, ಟೂತ್‌ಪೇಸ್ಟ್ , ಸಂತೂರ್ ಸೋಪ್, ಹಣ್ಣುಗಳು ಹಾಗೂ ಬೇಕರಿ ತಿಂಡಿಯನ್ನು ತಂದು ಕೊಡಲಾಗಿದೆ. ಇನ್ನು ಸುಮಾರು 3 ತಿಂಗಳ ಕಾಲ ಜೈಲಿನಲ್ಲಿಯೇ ಇರುವ ನಟ ದರ್ಶನ್‌ಗೆ ಮನೆ ಊಟ ಮಾಡಲು ನ್ಯಾಯಾಲಯದಿಂದ ಅನುಮತಿ ಸಿಗಲಿಲ್ಲ. ಆದ್ದರಿಂದ ಜೈಲೂಟವನ್ನೇ ಮಾಡುತ್ತಾ ಸಮಯ ಕಳೆಯುವಂತಾಗಿದೆ.
ಪ್ರತಿವಾರ ದರ್ಶನ್ ನೋಡಲು ಜೈಲಿಗೆ ಬರುತ್ತಿದ್ದರೂ ಈ ಬಾರಿ ದರ್ಶನ್‌ನನ್ನು ನೋಡಿದ ವಿಜಯಲಕ್ಷ್ಮಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಮೂರ್ನಾಲ್ಕು ವಾರ ಕೇವಲ ರಕ್ತ ಸಂಬಂಧಿಗಳು ಮಾತ್ರ ಭೇಟಿಯಾಗಲು ಬರುತ್ತಿದ್ದರು. ಈ ಬಾರಿ ನಟ ಧನ್ವೀರ್ ಕೂಡ ಆಗಮಿಸಿದ್ದರು. ದರ್ಶನ್ ನೋಡುತ್ತಿದ್ದಂತೆ ಹೇಮಂತ್ ಹಾಗೂ ಧನ್ವೀರ್ ಕೂಡ ಕಣ್ಣೀರಿಟ್ಟಿದ್ದಾರೆ. ಆದರೆ, ದರ್ಶನ್ ಮಾತ್ರ ಧೃತಿಗೆಡದೇ ಮೂವರನ್ನೂ ಸಂತೈಸಿದ್ದಾರೆ. ಸುಮಾರು ಅರ್ಧ ಗಂಟೆ ಚರ್ಚೆ ಬಳಿಕ ಆರೋಪಿ ದರ್ಶನ್ ಪುನಃ ಸೆಲ್‌ನತ್ತ ತೆರಳಿದ್ದಾರೆ.