ಹೊಸದಿಗಂತ ಯಲ್ಲಾಪುರ:
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಿಚಿತ್ರ ಹಾಗೂ ಆತಂಕಕಾರಿ ಕಾಡು ನೊಣಗಳ ಹಾವಳಿ ವಿಪರೀತವಾಗಿದೆ. ಪಟ್ಟಣದ ಕಾಳಮ್ಮ ನಗರ, ಕಲ್ಮಠ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮನೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ಈ ನೊಣಗಳು ಹಿಂಡುಹಿಂಡಾಗಿ ಲಗ್ಗೆ ಇಡುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಂಜೆಯಾಗುತ್ತಿದ್ದಂತೆ ವಿದ್ಯುತ್ ದೀಪಗಳ ಬೆಳಕಿಗೆ ಆಕರ್ಷಿತವಾಗುವ ಈ ನೊಣಗಳು, ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಈ ನೊಣಗಳು ಕಚ್ಚಿದ ತಕ್ಷಣ ಚರ್ಮದಿಂದ ರಕ್ತ ಹರಿಯುತ್ತಿದ್ದು, ಅತಿಯಾದ ಉರಿ ಮತ್ತು ಯಾತನೆ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಕ್ಕಳು ಮತ್ತು ವೃದ್ಧರು ಈ ಹಾವಳಿಯಿಂದಾಗಿ ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಸಾಮಾನ್ಯ ನೊಣಗಳಿಗಿಂತ ಭಿನ್ನವಾಗಿರುವ ಈ ಕಾಡು ನೊಣಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಟ್ಟಣಕ್ಕೆ ಲಗ್ಗೆ ಇಟ್ಟಿರುವುದು ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಆತಂಕ ಮೂಡಿಸಿದೆ. ನೊಣಗಳ ಕಡಿತದಿಂದ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಅಥವಾ ಇನ್ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬ ಆತಂಕ ನಿವಾಸಿಗಳನ್ನು ಕಾಡುತ್ತಿದೆ.
ಈಗಾಗಲೇ ಕಲ್ಮಠ ಮತ್ತು ಕಾಳಮ್ಮ ನಗರದ ಜನರು ಈ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಪಟ್ಟಣದಾದ್ಯಂತ ಔಷಧಿ ಸಿಂಪಡಣೆ ಮಾಡುವ ಮೂಲಕ ಈ ನೊಣಗಳ ಹಾವಳಿಯನ್ನು ನಿಯಂತ್ರಿಸಬೇಕು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಿಸಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.



