Tuesday, December 6, 2022

Latest Posts

ಮೂರನೇ ಟಿ 20 ಪಂದ್ಯದಲ್ಲಿ ಉಮ್ರಾನ್ ಮಲಿಕ್, ಸಂಜು ಸ್ಯಾಮ್ಸನ್‌ ಗೆ ಸ್ಥಾನ? ಕ್ಯಾಪ್ಟನ್ ಹಾರ್ದಿಕ್‌ ಏನಂದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ‌ ಟಿ 20 ಕದನ ರೋಚಕತೆ ಪಡೆದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಎರಡನೇ ಪಂದ್ಯದಲ್ಲಿ ಭಾರತೀಯರ ಭರ್ಜರಿ ಪ್ರದರ್ಶನದ ಮುಂದೆ ಕಿವೀಸ್‌ ಮಂಡಿಯೂರಿದೆ. ಆದ್ದರಿಂದ ನಾಳೆ (ನ.21) ನೆಪಿಯರ್‌ ನಲ್ಲಿ ನಡೆಯಲಿರುವ ಮೂರನೇ ಮತ್ತು ಕೊನೆಯ ಟಿ20 ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಇದರಲ್ಲಿ ಭಾರತ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ನ್ಯೂಜಿಲೆಂಡ್ ಗೆದ್ದರೆ ಸರಣಿ ಸಮಬಲವಾಗಲಿದೆ. ಈ ಪಂದ್ಯದಲ್ಲಾದರೂ ವೇಗಿ ಉಮ್ರಾನ್ ಮಲಿಕ್ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗಲಿದೆಯೇ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಬಿಸಿಸಿಐ ಹಾರ್ದಿಕ್‌ ಪಾಂಡ್ಯಾ ನೇತೃತ್ವದಲ್ಲಿ ಯುವ ಟಿ 20 ತಂಡ ಕಟ್ಟಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯುವ ಆಟಗಾರರಿಗೆ ಸಾಕಷ್ಟು ಅವಕಾಶ ನೀಡಲಾಗುತ್ತಿದೆ. ಅದಕ್ಕಾಗಿ ನ್ಯೂಜಿಲೆಂಡ್‌ ಸರಣಿಗೂ ಬಹುತೇಕ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಭಾನುವಾರ ನಡೆದ ಎರಡನೇ ಪಂದ್ಯದ ಆಟಗಾರರ ಪಟ್ಟಿ ನೋಡಿ ಫ್ಯಾನ್ಸ್‌ ಅಚ್ಚರಿಗೊಂಡಿದ್ದರು. ಟೀಂ ಇಂಡಿಯಾದ ಭವಿಷ್ಯದ ಸ್ಟಾರ್‌ ಗಳು ಎಂದು ಪರಿಗಣಿಸಲಾದ ಉಮ್ರಾನ್ ಮಲಿಕ್ ಮತ್ತು ಸಂಜು ಸ್ಯಾಮ್ಸನ್ ರನ್ನು ತಂಡದಿಂದ ಹೊರಗಿಡಲಾಗಿತ್ತು. ತಂಡದ ಮ್ಯಾನೇಜ್‌ ಮೆಂಟ್‌ ನಿರ್ಧಾರಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ದಿನೇಶ್‌ ಕಾರ್ತಿಕ್‌ ಗಾಗಿ ಪಂತ್‌ ರನ್ನು ಹೊರಗಿಟ್ಟ ಬಿಸಿಸಿಐ, ಈಗ ಪಂತ್‌ ಗಾಗಿ ಸ್ಯಾಮ್ಸನ್‌ ರನ್ನು ಬೆಂಚ್‌ ನಲ್ಲಿ ಕೂರಿಸಿ ಅವರ ಪ್ರತಿಭೆ ವ್ಯರ್ಥ ಮಾಡುತ್ತಿದೆ ಎಂದು ಅಭಿಮಾನಿಗಳು ದೂರಿದ್ದರು. ಜೊತೆಗೆ 2024 ರ ಟಿ 20 ವಿಶ್ವಕಪ್‌ ಪ್ರಾನ್‌ ನಲ್ಲಿ ಇರದ ಭುವನೇಶ್ವರ್‌ ಗೆ ಅವಕಾಶ ನೀಡಿ ಉಮ್ರಾನ್‌ ರನ್ನು ಕೈಬಿಟ್ಟಿದ್ದಕ್ಕೂ ಫ್ಯಾನ್ಸ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ʼಇದೇನಾ ನೀವು ಯುವಕರ ತಂಡ ಕಟ್ಟುವ ಪರಿʼ ಎಂದು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದ್ದರು. ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಅವರೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ರಿಷಬ್ ಪಂತ್ ಮತ್ತೆ ವೈಫಲ್ಯ ಕಂಡರು. ಜೊತೆಗೆ ಮತ್ತೊಬ್ಬ ಬ್ಯಾಟರ್ ಶ್ರೇಯಸ್‌ ಐಯ್ಯರ್‌ ಸಹ ಕಡಿಮೆ ಮೊತ್ತಕ್ಕೆ ಔಟ್‌ ಆಗಿ ನಿರಾಸೆ ಮೂಡಿಸಿದರು.
“ಎರಡನೇ ಪಂದ್ಯದಲ್ಲಿ ಸೂರ್ಯ ಅಬ್ಬರಿಸದಿದ್ದರೆ ತಂಡ 160 ರನ್ ಗಳಿಸಲು ಸಹ ತಂಡವು ಪ್ರಯಾಸಪಡುತ್ತಿತ್ತು. ಮುಂದಿನ ವಿಶ್ವಕಪ್‌ ಗೆ ಸಿದ್ಧತೆ ಆರಂಭಿಸಿದ್ದರೆ,  ಉತ್ತಮ ಆಟಗಾರರಿಗೆ ಈಗಲೇ ಅವಕಾಶ ನೀಡಿ. 20 ಕ್ರಿಕೆಟ್‌ನಲ್ಲಿ ಮಾರಕ ವೇಗಿ ಎಷ್ಟು ಅಗತ್ಯ ಎಂಬುದು ಸಾಬೀತಾಗುತ್ತಲೇ ಇದೆ. ಜಮ್ಮು ಮತ್ತು ಕಾಶ್ಮೀರ ಮೂಲದ ವೇಗಿಯ ಬೆಳವಣಿಗೆಗೆ ನ್ಯೂಜಿಲೆಂಡ್ ಸರಣಿಯಲ್ಲಿ ಅವಕಾಶ ನೀಡುವುದು ನಿರ್ಣಾಯಕವಾಗಿದೆʼ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಆದರೆ ನಾಯಕ ಹಾರ್ದಿಕ್ ಪಾಂಡ್ಯ ಹೇಳಿಕೆಗಳನ್ನು ಗಮನಿಸಿದರೆ, ಮೂರನೇ ಟಿ 20 ಗಾಗಿ ಮ್ಯಾನೇಜ್‌ಮೆಂಟ್ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು ಅದೇ ತಂಡವನ್ನು ಮುಂದುವರೆಸುವ ಇರಾದೆಯಲ್ಲಿದ್ದೇವೆ ಎಂದು ಹಾರ್ದಿಕ್‌ ಸುಳಿವು ನೀಡಿದ್ದಾರೆ.
“ಬದಲಾವಣೆಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನು ತಂಡದಲ್ಲಿರುವ ಎಲ್ಲರಿಗೂ ಅವಕಾಶ ನೀಡಲು ಬಯಸುತ್ತೇನೆ. ಆದರೆ ಇನ್ನು ಕೇವಲ ಒಂದು ಪಂದ್ಯ ಉಳಿದಿದೆ. ಆದ್ದರಿಂದ ಇದು ಸ್ವಲ್ಪ ಕಠಿಣವಾಗಿದೆ” ಎಂದು ಹಾರ್ದಿಕ್ ಹೇಳಿದ್ದಾರೆ.
ಆದ್ದರಿಂದ ತಂಡದಲ್ಲಿ ಸ್ಥಾನ ಪಡೆಯಲು ಉಮ್ರಾನ್‌ ಹಾಗೂ ಸ್ಯಾಮ್ಸನ್‌ ಮತ್ತಷ್ಟು ಕಾಲ ಕಾಯಬೇಕಿರುವುದು ಅನಿವಾರ್ಯವಾಗಿದೆ.

ಭಾರತ ತಂಡ:
ಹಾರ್ದಿಕ್ ಪಾಂಡ್ಯ (ಸಿ), ರಿಷಬ್ ಪಂತ್, ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಸಿಂಗ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!