ಕೆ ಎಲ್ ರಾಹುಲ್‌ ಲಖನೌ ತಂಡಕ್ಕೆ ಗುಡ್ ಬೈ ಹೇಳ್ತಾರಾ?: ಮಾಲೀಕ ಗೋಯೆಂಕಾ ಕೊಟ್ರು ಉತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಐಪಿಎಲ್ ಟೂರ್ನಿಗೂ ಮುನ್ನ ಕನ್ನಡಿಗ ಕೆ ಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ತೊರೆಯಲಿದ್ದಾರೆ ಎನ್ನುವ ವಿಚಾರ ಬಾರಿ ಚರ್ಚೆಯಾಗುತ್ತಿದ್ದು, ಇದೆಲ್ಲದರ ನಡುವೆ ಮಂಗಳವಾರ ಕೆ ಎಲ್ ರಾಹುಲ್, ಲಖನೌ ಸೂಪರ್ ಜೈಂಟ್ಸ್‌ ಫ್ರಾಂಚೈಸಿ ಮಾಲೀಕರಾದ ಡಾ. ಸಂಜೀವ್ ಗೋಯೆಂಕಾ ಅವರನ್ನು ಭೇಟಿ ಮಾಡಿದ್ದರು.

ಇದೀಗ ಸಂಜೀವ್ ಗೋಯೆಂಕಾ ಸುದ್ದಿಗೋಷ್ಠಿ ನಡೆಸಿ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು, ಲೀಗ್ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಪಂದ್ಯ ಮುಗಿಯುತ್ತಿದ್ದಂತೆಯೇ ಮೈದಾನದಲ್ಲಿಯೇ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ, ನಾಯಕ ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಹುಟ್ಟುಹಾಕಿತ್ತು. ಇದಷ್ಟೇ ಅಲ್ಲದೇ ಸಂಜೀವ್ ಗೋಯೆಂಕಾ ಅವರ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇನ್ನು ಇದರ ಬೆನ್ನಲ್ಲೇ ಕೆ ಎಲ್ ರಾಹುಲ್ 2025ರ ಐಪಿಎಲ್ ಟೂರ್ನಿಯಲ್ಲಿ ಲಖನೌ ತಂಡವನ್ನು ತೊರೆಯಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.

ಇನ್ನು ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಸಂಜೀವ್ ಗೋಯೆಂಕಾ ಮಹತ್ವದ ಸುದ್ದಿಗೋಷ್ಠಿ ನಡೆಸಿ ಹಲವು ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಇದಷ್ಟೇ ಅಲ್ಲದೇ ಮಹತ್ವದ ಘೋಷಣೆಯನ್ನೂ ಮಾಡಿದ್ದಾರೆ. ನಾನು ಗಾಳಿಸುದ್ದಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಅವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದು, ಅವರು ನಮ್ಮ ಕುಟುಂಬದವರಿದ್ದಂತೆ ಎಂದು ಚುಟುಕಾಗಿ ಉತ್ತರಿಸಿದ್ದಾರೆ

ಇನ್ನು ಇದೇ ವೇಳೆ ಲಖನೌ ಸೂಪರ್ ಜೈಂಟ್ಸ್‌ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ, ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಜಹೀರ್ ಖಾನ್, ತಮ್ಮ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಈ ಮೊದಲು ಗೌತಮ್ ಗಂಭೀರ್, ಲಖನೌ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಗಂಭೀರ್ ಮಾರ್ಗದರ್ಶನದಲ್ಲಿ ಲಖನೌ ತಂಡವು ಸತತ ಎರಡು ಬಾರಿ ಪ್ಲೇ ಆಫ್ ಪ್ರವೇಶಿಸಿತ್ತು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!