ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಸ್ಲಿಮರನ್ನು ಹಿಂದು ಧಾರ್ಮಿಕ ಟ್ರಸ್ಟ್‌ಗಳ ಭಾಗವಾಗಲು ಅನುಮತಿ ನೀಡಲಾಗುತ್ತದೆಯೇ? ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ಹೊಸ ಕಾನೂನಿನ ಹಲವು ನಿಬಂಧನೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ‘ಬಳಕೆದಾರರಿಂದ ವಕ್ಫ್’ ಆಸ್ತಿಗಳ ನಿಬಂಧನೆಗಳ ಬಗ್ಗೆ ಕಠಿಣ ಪ್ರಶ್ನೆಗಳನ್ನು ಕೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಿರುವ ಹೊಸ ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ 73 ಅರ್ಜಿಗಳ ವಿಚಾರಣೆ ನಡೆಸಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕಕ್ಕೆ ಅವಕಾಶ ನೀಡಿರುವುದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಇನ್ನು ಮುಂದೆ ಮುಸ್ಲಿಮರನ್ನು ಹಿಂದು ದತ್ತಿ ಮಂಡಳಿಗಳ ಭಾಗವಾಗಲು ನೀವು ಅನುಮತಿಸುತ್ತೀರಾ? ಅನುಮತಿ ನೀಡುವುದಾದರೆ ಅದನ್ನು ಬಹಿರಂಗವಾಗಿ ಹೇಳಿ ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.
100 ಅಥವಾ 200 ವರ್ಷಗಳ ಹಿಂದೆ ಸಾರ್ವಜನಿಕ ಟ್ರಸ್ಟ್ ಅನ್ನು ವಕ್ಫ್ ಎಂದು ಘೋಷಿಸಿದಾಗ, ಅದನ್ನು ವಕ್ಫ್ ಮಂಡಳಿಯು ಇದ್ದಕ್ಕಿದ್ದಂತೆ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾದ ಆಸ್ತಿಗಳನ್ನು ಡಿ-ನೋಟಿಫೈ ಮಾಡಲಾಗುವುದಿಲ್ಲ ಎಂದು ಆದೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ ಪ್ರಸ್ತಾಪ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಸಲಹೆಯನ್ನು ವಿರೋಧಿಸಿತು ಮತ್ತು ಅಂತಹ ನಿರ್ದೇಶನದ ನೀಡುವ ಮೊದಲು ವಿಚಾರಣೆ ನಡೆಸುವಂತೆ ಕೋರಿತು. ವಕ್ಫ್ ಕಾಯ್ದೆಯ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಇಂದು ಯಾವುದೇ ಮಧ್ಯಂತರ ಆದೇಶ ನೀಡದೆ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.