ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಈರುಳ್ಳಿ, ಬೆಳ್ಳುಳ್ಳಿ, ತರಕಾರಿ ಹಣ್ಣುಗಳ ಬೆಲೆ ಗಗನಕ್ಕೇರಿ ಜನ ಹೈರಾಣಾಗಿದ್ದಾರೆ. ಇದರ ಮಧ್ಯೆ ನಂದಿನಿ ಹಾಲಿನ ದರ ಏರಿಕೆಯಾಗಬಹುದು ಎನ್ನುವ ಸುದ್ದಿ ಹೊರಬಿದ್ದಿದೆ. ಈ ಹಿಂದೆಯಷ್ಟೇ ಹಾಲಿನ ದರ ಏರಿಕೆಯಾಗಿದ್ದು, ಜನ ಅದನ್ನು ಸ್ವೀಕರಿಸೋದಕ್ಕೆ ಕಷ್ಟವಾಗಿತ್ತು. ಗಾಯದ ಮೇಲೆ ಬರೆಯಂತೆ ಕೆಎಮ್‌ಎಫ್ ಹಾಲಿನ ದರ ಏರಿಕೆಗೆ ಚಿಂತನೆ ನಡೆಸಿದೆ.
ಈ ಹಿಂದೆ ಪ್ರತಿ ಲೀಟರ್ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್ ನೀಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ, ಮತ್ತೆ ಕೆಎಂಎಫ್ ಹಾಲಿನ ದರ ಏರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ರೈತರು ಹಾಗೂ ಹಾಲು ಒಕ್ಕೂಟಗಳು ಪ್ರತಿ ಲೀಟರ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆ ಮಾಡುವಂತೆ ಕೆಎಂಎಫ್ಗೆ ಮನವಿ ಮಾಡಿವೆ. ಈ ಬಗ್ಗೆ ಚಳಿಗಾಲದ ಅಧಿವೇಶನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ಆದರೆ, ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹಾಲಿನ ದರ ಏರಿಕೆಯ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದರು ಎನ್ನುವುದನ್ನೂ ಮರೆಯುವಂತಿಲ್ಲ.