May 17, 2026
Sunday, May 17, 2026
spot_img

ಆರ್‌ಸಿಬಿ ಪ್ಲೇ-ಆಫ್ ಕನಸಿಗೆ ಮಳೆ ವಿಲನ್ ಆಗುತ್ತಾ? ಶಿಮ್ಲಾ ಹವಾಮಾನ ಕೇಂದ್ರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ-ಆಫ್ ರೇಸ್ ಈಗ ರೋಚಕ ಘಟ್ಟ ತಲುಪಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಅತ್ಯಂತ ಸುಂದರ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಅತ್ಯಂತ ನಿರ್ಣಾಯಕ ಪಂದ್ಯ ನಡೆಯಲಿದೆ.

ಉಭಯ ತಂಡಗಳಿಗೂ ಪ್ಲೇ-ಆಫ್ ಹಾದಿಯನ್ನು ಜೀವಂತವಾಗಿಟ್ಟುಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ವರುಣನ ಆತಂಕ ಮನೆಮಾಡಿತ್ತು. ಬೆಟ್ಟಗಳ ಮಡಿಲಲ್ಲಿರುವ ಧರ್ಮಶಾಲಾದಲ್ಲಿ ಕಳೆದ ಸಂಜೆ ತರಬೇತಿ ಅವಧಿಯ ವೇಳೆ ದಿಢೀರ್ ಮಳೆ ಸುರಿದಿದ್ದರಿಂದ, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದೇ ಎಂಬ ಭೀತಿ ಸೃಷ್ಟಿಯಾಗಿತ್ತು.

ಕ್ರಿಕೆಟ್ ಅಭಿಮಾನಿಗಳ ಸದ್ಯದ ಆತಂಕಕ್ಕೆ ಈಗ ಹವಾಮಾನ ಇಲಾಖೆ ತೆರೆ ಎಳೆದಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಇಂದಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆಯ ಯಾವುದೇ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಶಿಮ್ಲಾ ಹವಾಮಾನ ಕೇಂದ್ರದ ಅಧಿಕೃತ ಮಾಹಿತಿಯ ಪ್ರಕಾರ, ಇಂದು ಧರ್ಮಶಾಲಾದಲ್ಲಿ ಮಳೆಯಾಗುವ ಸಾಧ್ಯತೆ ತೀರಾ ವಿರಳ. ಪಂದ್ಯದ ಅವಧಿಯಲ್ಲಿ ಮಳೆ ಬರುವ ಸಂಭವನೀಯತೆ ಕೇವಲ ಶೇ. 0 ಇಂದ ಶೇ. 15 ರಷ್ಟು ಮಾತ್ರ ಇದೆ ಎನ್ನಲಾಗಿದೆ.

ದೇಶದ ಇತರೆ ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದರೆ, ಧರ್ಮಶಾಲಾದಲ್ಲಿ ಮಾತ್ರ ಕ್ರಿಕೆಟ್ ಆಡಲು ಅತ್ಯಂತ ಆಹ್ಲಾದಕರ ವಾತಾವರಣವಿದೆ. ಹಗಲಿನ ವೇಳೆಯಲ್ಲಿ ಇಲ್ಲಿನ ತಾಪಮಾನವು 21°C ನಿಂದ 24°C ಆಸುಪಾಸಿನಲ್ಲಿ ಇರಲಿದ್ದು, ಸಂಜೆಯಾಗುತ್ತಿದ್ದಂತೆ ತಂಪಾದ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ರನ್ ಮಳೆಯನ್ನಷ್ಟೇ ನಿರೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಪ್ರಕೃತಿ ಮಾತೆ ಸಂಪೂರ್ಣ ಸಾಥ್ ನೀಡಲಿದ್ದಾಳೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !