ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಕಾಲದಲ್ಲಿ ಉಳಿದೆಲ್ಲಾ ಉದ್ಯಮಗಳು ನೆಲಕಚ್ಚಿದರೂ ಭಾರತದ ಐಟಿ ಉದ್ಯಮ ಮಾತ್ರ ಬಿದ್ದಿರಲಿಲ್ಲ ವರ್ಕ ಫ್ರಂ ಹೋಮ್ ನಂತಹ ಸೌಲಭ್ಯಗಳಿಂದ ಐಟಿ ಕ್ಷೇತ್ರವು ಹೆಚ್ಚಿನ ಲಾಭದೊಂದಿಗೆ ಮುನ್ನೆಡೆದಿದ್ದವು. ಇವು ಅಂತಿಮವಾಗಿ ಭತ್ಯೆ, ವೇತನ ಹೆಚ್ಚಳಗಳಿಗೂ ಕಾರಣವಾಗಿದ್ದವು. ಆದರೆ ಈಗ ಪ್ರಸ್ತುತ ಅಮೆರಿಕ ಮತ್ತು ಯುರೋಪ್ ನಲ್ಲಿನ ಆರ್ಥಿಕ ಹಿಂಜರಿತವು ಕೊಂಚ ಮಟ್ಟಿಗೆ ಈ ಬೆಳವಣಿಗೆಯನ್ನು ತಣ್ಣಗಾಗಿಸಲಿವೆ ಎನ್ನಲಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಬಂಪರ್ ಲಾಭ ಗಳಿಸಿದ TCS, Infosys, Wipro ಮತ್ತು ಇತರ ಭಾರತೀಯ IT ಕಂಪನಿಗಳು ಇದೀಗ ಅಮೆರಿಕದಲ್ಲಿ ಆರ್ಥಿಕ ಕುಸಿತವುಂಟಾಗಿರುವುದರಿಂದ ಎಚ್ಚರಿಕೆಯ ಹಾದಿಯಲ್ಲಿ ನಡೆಯುತ್ತಿವೆ. ವೇತನ ಮತ್ತು ಬೇಡಿಕೆಯಲ್ಲಿ ಕುಸಿತ ವುಂಟಾಗಬಹುದು ಎಂಬುದು ಕಂಪನಿಗಳ ಅಂದಾಜು, ಆದರೆ ಅಮೆರಿಕದಲ್ಲಿನ ಆರ್ಥಿಕ ಕುಸಿತವು ಭಾರತದ ಐಟಿ ಕಂಪನಿಗಳಿಗೆ ಧನಾತ್ಮಕವಾಗಲಿದೆ ಎಂದು ಕೆಲ ತಜ್ಞರು ನಂಬುತ್ತಾರೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಡಿಜಿಟಲೀಕರಣದತ್ತ ತ್ವರಿತ ಬದಲಾವಣೆಯು ಭಾರತೀಯ ಐಟಿ ವಲಯಕ್ಕೆ ದೊಡ್ಡ ವರವಾಗಿ ಪರಿಣಮಿಸಿದೆ. TCS, Infosys ಮತ್ತು Wipro ನಂತಹ ದೈತ್ಯರು ಪ್ರಧಾನವಾಗಿ US ಮತ್ತು ಯುರೋಪಿಯನ್ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿದೆ, ಇದು ಅವರ ಆದಾಯದ 80-90% ಗೆ ಕೊಡುಗೆ ನೀಡುತ್ತದೆ.
ಆದರೆ ಪ್ರಸ್ತುತ ಯುಎಸ್ ಮತ್ತು ಯುರೋಪ್ ನಲ್ಲಿ ಆರ್ಥಿಕ ಹಿಂಜರಿತವುಂಟಾಗುತ್ತಿರುವುದರಿಂದ ಈ ಐಟಿ ಕಂಪನಿಗಳು ಈಗಾಘಲೇ ಒತ್ತಡದಲ್ಲಿವೆ. ಆರ್ಥಿಕ ಹಿಂಜರಿತವು ಈ ಕಂಪನಿಗಳ 2023ರ ಹಣಕಾಸು ವರ್ಷದ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಆದಾಗ್ಯೂ, ಕೆಲ ತಜ್ಞರ ಪ್ರಕಾರ ಯುಎಸ್‌ನಲ್ಲಿನ ಆರ್ಥಿಕ ಕುಸಿತವು ಭಾರತದ ಐಟಿ ಮೇಜರ್‌ಗಳಿಗೆ ಅಷ್ಟೊಂದು ಕೆಟ್ಟದಾಗಿ ಪರಿಣಮಿಸುವುದಿಲ್ಲ ಎನ್ನಲಾಗುತ್ತದೆ. ನಿಧಾನಗತಿಯ ಆದಾಯದ ಬೆಳವಣಿಗೆಯು ವೇತನ ಹೆಚ್ಚಳವನ್ನು ನಿಗ್ರಹಿಸಬಹುದು ಮತ್ತು ಕ್ಷೀಣಿಸುವಿಕೆಯನ್ನು ನಿಧಾನಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಭಾರತದ ಐಟಿಕಂಪನಿಗಳ ಆದಾಯದ ಸಿಂಹಪಾಲು ಯುಎಸ್ ಮತ್ತು ಯುರೋಪ್ ನಿಂದ ಬರುತ್ತವೆ. ಆದರೆ ಪ್ರಸ್ತುತ ಇವೆರಡೂ ಪ್ರದೇಶಗಳು ಅತಿ ಹೆಚ್ಚು ಹಣದುಬ್ಬರ ಒತ್ತಡ ಎದುರಿಸುತ್ತಿರುವುದರಿಂದ ಐಟಿ ಕಂಪನಿಗಳ ಆದಾಯದಲ್ಲಿ ವ್ಯತ್ಯಾಸವಾಗಬಹುದು ಎನ್ನಲಾಗುತ್ತಿದೆ. 2022ರಲ್ಲಿ 19ಶೇಕಡಾದಷ್ಟು ಬೆಳವಣಿಗೆ ಕಂಡ ಆದಾಯವು ಮುಂದಿನ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕ್ಷೀಣಿಸಬಹುದು ಎನ್ನಲಾಗುತ್ತಿದೆ.
ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತಗಳಿಂದಾಗಿ ಆದಾಯ ಬೆಳವಣಿಗೆಯು ಈ ಹಣಕಾಸು ವರ್ಷದಲ್ಲಿ 12-13% ಮತ್ತು ಮುಂದಿನ ವರ್ಷದಲ್ಲಿ 9-10% ಗೆ ಮಿತಿಯಾಗುವ ನಿರೀಕ್ಷೆಯಿದೆ.