July 23, 2026
Thursday, July 23, 2026
spot_img

ಸಚಿನ್ ತೆಂಡೂಲ್ಕರ್ ರೆಕಾರ್ಡ್ ಬ್ರೇಕ್ ಮಾಡ್ತಾರಾ ವೈಭವ್? ಇಂಗ್ಲೆಂಡ್ ಸರಣಿಯಲ್ಲೂ ಸಿಗಲ್ವಾ ಚಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಕ್ರಿಕೆಟ್‌ನ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭಾರತ ತಂಡದ ಪರ ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲೇ ಅವರು ಡೆಬ್ಯೂ ಮಾಡಲಿದ್ದಾರೆ ಎನ್ನಲಾಗಿತ್ತಾದರೂ, ಆ ನಿರೀಕ್ಷೆ ಹುಸಿಯಾಗಿದೆ. ಇದೀಗ ಮುಂದಿನ ಇಂಗ್ಲೆಂಡ್ ಸರಣಿಯಲ್ಲೂ ಅವರಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಯುವ ಆಟಗಾರ ವೈಭವ್ ಚಾನ್ಸ್‌ಗಾಗಿ ಕಾಯುವುದು ಅನಿವಾರ್ಯ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೇಟ್ ಸ್ಪಷ್ಟಪಡಿಸಿದ್ದಾರೆ.

ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಕೋಚ್

ಐರ್ಲೆಂಡ್ ವಿರುದ್ಧದ 2 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ (5 ಮತ್ತು 0 ರನ್) ಸತತ ವೈಫಲ್ಯ ಅನುಭವಿಸಿದರೂ, ಅವರ ಪರ ಕೋಚ್ ಬೆಂಬಲವಾಗಿ ನಿಂತಿದ್ದಾರೆ. “ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಾಗಿದ್ದಾರೆ. ಆದರೆ ಇತ್ತೀಚೆಗೆ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಒಂದೆರಡು ಪಂದ್ಯಗಳ ವೈಫಲ್ಯಕ್ಕಾಗಿ ತಂಡದಿಂದ ಹೊರಗಿಡಲು ಸಾಧ್ಯವಿಲ್ಲ. ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ದೀರ್ಘಾವಧಿಯ ಅವಕಾಶ ನೀಡುತ್ತೇವೆ,” ಎಂದು ಟೆನ್ ಡೊಶ್ಚೇಟ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆಯ ಮೇಲೆ ವೈಭವ್ ಕಣ್ಣು

ಐಪಿಎಲ್‌ನಲ್ಲಿ 230ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿರುವ ವೈಭವ್ ಸೂರ್ಯವಂಶಿ, ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿದರೆ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಅವರು ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸದ್ಯ ಈ ಐತಿಹಾಸಿಕ ದಾಖಲೆ ಕ್ರಿಕೆಟ್ ದೇವರೆನಿಸಿಕೊಂಡ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !