ಕೊಡಗಿನ ವಿವಿಧೆಡೆ ಗಾಳಿ ಮಳೆ: ಭಾರೀ ಹಾನಿ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಹಾನಿಯಾಗಿದೆ. ನಿರಂತರ ಗುಡುಗು, ಸಿಡಿಲು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.
ದಕ್ಷಿಣ ಕೊಡಗಿನ ಗೋಣಿಕೊಪ್ಪ, ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗೋಣಿಕೊಪ್ಪದಲ್ಲಿ ಮಳೆಯ ಆರ್ಭಟಕ್ಕೆ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ನೆಲಕ್ಕುರುಳಿವೆ. ಮಾರಾಟಕ್ಕಿಟ್ಟ ವಸ್ತುಗಳು ರಸ್ತೆ ಪಾಲಾಗಿವೆ. ಮನೆಗಳ ಹಂಚುಗಳು ಮತ್ತು ಮೇಲ್ಛಾವಣಿಗಳು ಹಾರಿ ಹೋಗಿವೆ.

ಸಂತೆ ದಿನವಾದ ಭಾನುವಾರ ದಿಢೀರ್ ಆಗಿ ಗಾಳಿ ಮಳೆಯಾದ ಕಾರಣ ಸಂತೆ ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸಿದರು. ಸಿಡಿಲಬ್ಬರಕ್ಕೆ ಜನ ಆತಂಕಗೊಂಡರು. ವಿದ್ಯುತ್ ಕಂಬಗಳು ಕೂಡಾ ಬಿದ್ದಿದ್ದು, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಧರೆಗುರುಳಿದ ಮರಗಳು: ಕೊಡಗಿನ ಗಡಿಭಾಗ ಬೈಲುಕೊಪ್ಪದಲ್ಲಿ ಸುರಿದ ಗಾಳಿ ಮಳೆಗೆ ತೆಂಗಿನ ಮರ ಸೇರಿದಂತೆ ಇತರ ಮರಗಳು ಧರೆಗುರುಳಿವೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯ ಮೇಲೆ ತೆಂಗಿನ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!