Saturday, July 2, 2022

Latest Posts

ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ: ಬಿ.ಎಲ್.ಸಂತೋಷ್

ಹೊಸ ದಿಗಂತ ವರದಿ, ಮೈಸೂರು:

ಬರುವ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕರೆ ನೀಡಿದರು.
ಶನಿವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕದಿಂದ ಏರ್ಪಡಿಸಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಪೂರ್ಣ ಬಹುಮತ ಬಾರದ ಕಾರಣ ಸ್ವಲ್ಪ ವ್ಯತ್ಯಾಸಗಳು, ಅನಾನುಕೂಲಗಳನ್ನು ಎದುರಿಸುವಂತಾಯಿತು. ಆದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಇಂತಹ ಪರಿಸ್ಥಿತಿ ಬರಬಾರದು. ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗೆಲ್ಲುವ ಅವಕಾಶಗಳಿದ್ದರೂ, ಅಂತಹ ಅವಕಾಶಗಳನ್ನು ಕಳೆದುಕೊಳ್ಳುವುದಕ್ಕೆ ಪಕ್ಷ ಇಷ್ಟಪಡುವುದಿಲ್ಲ. ಹಾಗಾಗಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಿಂದಲೇ ಪಕ್ಷದ ಅಭ್ಯರ್ಥಿಯನ್ನು ಬಹುಮತದೊಂದಿಗೆ ಗೆಲ್ಲಿಸುವ ಕೆಲಸ ಆಗಬೇಕು. ಮೈಸೂರು-ಚಾಮರಾಜನಗರ ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ ಕನಿಷ್ಠ 8 ಕ್ಷೇತ್ರಗಳನ್ನು ಗೆಲ್ಲುವ ಅವಕಾಶ, ಸಾಧ್ಯತೆಗಳು ಬಿಜೆಪಿಗೆ ಇದೆ. ಇದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಈ ಎರಡು ಜಿಲ್ಲೆಗಳಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಬೇಕು ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ಬಳಿಕ ಇಲ್ಲಿಯ ತನಕ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನ ಕೇವಲ ಇಬ್ಬರನ್ನು ಬಿಟ್ಟು ಹೊರಗೆ ಹೋಗಿಲ್ಲ. ಬದಲಾವಣೆಗೆ ಆ ಪಕ್ಷ ತೆರೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಆ ಪಕ್ಷ ಸರ್ವ ಪತನವಾಗಿ, ನಾಶವಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಯುವ ನಾಯಕತ್ವ ಬೆಳೆಯಬೇಕಾದರೆ, ಒಂದು ಅಲ್ಲಿ ವಂಶದಿoದ ಬಂದoತಹ ಹುಟ್ಟಿದ ಪ್ರಮಾಣ ಪತ್ರವಿರಬೇಕು, ಇಲ್ಲವೇ ಆ ಕುಟುಂಬದವರನ್ನು ವಿವಾಹವಾದ ಸರ್ಟೀಫಿಕೇಟ್ ಇರಬೇಕು. ಇಲ್ಲದಿದ್ದರೆ ಅಲ್ಲಿ ಯುವ ನಾಯಕತ್ವ ಬೆಳೆಯಲು ಸಾಧ್ಯವಾಗುವುದೇ ಇಲ್ಲ. ಯಾಕೇಂದರೆ ಕುಟುಂಬ ರಾಜಕಾರಣ, ವಂಶ ರಾಜಕಾರಣ ಆ ಮಟ್ಟಿಗೆ ಅಲ್ಲಿದೆ. ಅಂತಹದ್ದೇ ಪರಿಸ್ಥಿತಿ ಕೂಡ ಜೆಡಿಎಸ್ ಸೇರಿದಂತೆ ದೇಶದಲ್ಲಿರುವ ಹಲವಾರು ಪ್ರಾದೇಶಿಕ ಪಕ್ಷಗಳಲ್ಲಿದೆ. ಆದರೆ ಇಂತಹ ಪರಿಸ್ಥಿತಿ ಬಿಜೆಪಿ ಇಲ್ಲ. ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಬದಲಾವಣೆಗಳು ನಿರಂತರವಾಗಿ ಪಕ್ಷದಲ್ಲಿ ಆಗುತ್ತಲೇ ಇರುತ್ತದೆ. ಕಳೆದ 25 ವರ್ಷಗಳಲ್ಲಿ ಅನೇಕ ನಾಯಕರುಗಳು ಬಿಜೆಪಿಯಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಹೊಸ ವ್ಯವಸ್ಥೆ ಸೃಷ್ಠಿಸುವ ಕೆಲಸ ಪಕ್ಷದಲ್ಲಿ ನಡೆಯುತ್ತಿದೆ. ಕುಟುಂಬ ರಾಜಕಾರಣ, ವಂಶಪಾರAರ‍್ಯ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶವೇ ಇಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್ ಮುಂತಾದ ನಾಯಕರು ಕುಟುಂಬ ರಾಜಕಾರಣ, ವಂಶ ರಾಜಕಾರಣದಿಂದ ಬಂದವರಲ್ಲ, ಅವರು ತಳಮಟ್ಟದ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿ ಮೇಲ್ಮಟ್ಟಕ್ಕೆ ಬಂದವರು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ತನ್ನ ಆಡಳಿತದಲ್ಲಿ ಸಮಗ್ರವಾಗಿ ಬದಲಾವಣೆಯನ್ನು ತರುತ್ತಿದೆ. ಆಡಳಿತ ವ್ಯವಸ್ಥೆಗೆ ತರಬೇತಿಯನ್ನು ನೀಡಿ, ಅಧಿಕಾರಿಗಳು, ಸಿಬ್ಬಂದಿಗಳ ಮನಸ್ಥಿತಿಯನ್ನು ಬದಲಾಯಿಸಿ, ಸರ್ಕಾರದ ಸೌಲಭ್ಯಗಳು ಜನರಿಗೆ ಸಹಜವಾಗಿಯೇ ಯಾವುದೇ ಭ್ರಷ್ಟಾಚಾರವಿಲ್ಲ ತಲುಪುವ ಕೆಲಸ ನಡೆಯುತ್ತಿದೆ. ದೇಶದ ಪ್ರತಿಯೊಂದು ಹಳ್ಳಿಯನ್ನು ಮುಟ್ಟುವ ಕೆಲಸ ನಡೆಯುತ್ತಿದೆ. ಇದೇ ರೀತಿ ಬದಲಾವಣೆಯ ಪರ್ವ ಸ್ಥಳೀಯ ಸಂಸ್ಥೆಗಳಲ್ಲೂ ನಡೆಯಬೇಕು. ಬಿಜೆಪಿ ಅಧಿಕಾರದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ ಈ ರೀತಿಯ ಬದಲಾವಣೆ ನಡೆಯಬೇಕು ಎಂದು ತಿಳಿಸಿದರು.
ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ಸೋಮಸುಂದರ್, ವಾಣೀಶ್, ಗ್ರಾಮಾಂತರ ಅಧ್ಯಕ್ಷ ಮಂಗಳ ಸೋಮಶೇಖರ್, ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿ ಮೈ.ವಿ.ರವಿಶಂಕರ್, ಮಂಡ್ಯದ ಜಿಲ್ಲಾಧ್ಯಕ್ಷ ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇAದ್ರ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ತುಳುಸಿ ಮುನಿರಾಜೇಗೌಡ, ಅಶ್ವಥ್ ನಾರಾಯಣ್, ನಗರಪಾಲಿಕೆ ಮೇಯರ್ ಸುನಂದಾಪಾಲನೇತ್ರ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss