ಪವನ್‌ ಇಲ್ಲದಿದ್ದರೂ‌ ಬಲಿಷ್ಠವಾಗಿದೆ ಬೆಂಗಳೂರಿನ ಗೂಳಿಪಡೆ! ಎರಡನೇ ಪ್ರಶಸ್ತಿಗೆ ಇಂದಿನಿಂದ ಬುಲ್ಸ್ ಗಳ ಹೋರಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂದು (ಅಕ್ಟೋಬರ್ 7) ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9)ಗೆ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತನ್ನ ಎರಡನೇ ಪ್ರಶಸ್ತಿಗಾಗಿ ಅನ್ವೇಷಣೆಯನ್ನು ಪ್ರಾರಂಭಿಲಿದೆ.
ಸೀಸನ್ 6 ಚಾಂಪಿಯನ್‌ ಬುಲ್‌ ಗೆ ಈ ಬಾರಿ ಹರಾಜಿನಲ್ಲೇ ದೊಡ್ಡ ಅಘಾತವೊಂದು ಎದುರಾಗಿದೆ. ತಂಡದ ದೊಡ್ಡ ಬಲವಾಗಿದ್ದ ವಿಶ್ವಶ್ರೇಷ್ಠ ಆಟಗಾರ ಪವನ್‌ ಸೆಹ್ರಾವತ್‌ ತಂಡವನ್ನು ಬಿಟ್ಟು ಹೊರನಡೆದಿದ್ದಾರೆ. ಆದರೆ, ಇದರಿಂದ ಬುಲ್ಸ್‌ ತಂಡದ ಬಲವೇನೂ ಕುಂದಿಲ್ಲ. ಪ್ರಾಂಚೈಸಿ ಪವನ್‌ ಸ್ಥಾನದಲ್ಲಿ 1.70 ಕೋಟಿ ಕೊಟ್ಟು ವಿಕಾಸ್ ಕಂಡೋಲಾ‌ ರನ್ನು ಕರೆತಂದಿದೆ. ವಿಕಾಸ್‌ ಸಹ ಪವನ್‌ ರೀತಿಯಲ್ಲೇ ಪ್ರೋ ಕಬಡ್ಡಿಯಲ್ಲಿ ಹಲವಾರು ದಾಖಲೆಗಳ ಒಡೆಯ. 1000 ಕ್ಕೂ ಹೆಚ್ಚು ದಾಳಿಗಳನ್ನು (1240) ನಡೆಸಿರುವ ದಾಳಿಕಾರ ವಿಕಾಸ್ ತನ್ನ ಹೆಸನಲ್ಲಿ 16 ಸೂಪರ್ ರೈಡ್‌ಗಳು ಮತ್ತು 25 ಸೂಪರ್ 10 ಗಳನ್ನು ಹೊಂದಿರುವ ಬಲಿಷ್ಠ ಆಟಗಾರ. ಪ್ರೋ ಕಬಡ್ಡಿಯಲ್ಲಿ ಹತ್ತಿರ ಹತ್ತಿರ 600 ಒಟ್ಟು ರೈಡ್ ಪಾಯಿಂಟ್‌ಗಳನ್ನು (597) ಹೊಂದಿದ್ದಾರೆ.
ಜೊತೆಗೆ ಈ ಬಾರಿ ವಿಕಾಸ್‌ ಗೆ ಉತ್ತಮ ತಂಡವನ್ನೂ ನೀಡಿದ್ದು, ಬೆಂಗಳೂರು ಟೂರ್ನಿಯ ಅತ್ಯಂತ ಬಲಿಷ್ಠ ತಂಡಗಳಲ್ಲೊಂದಾಗಿದೆ. ಬೆಂಗಳೂರು ಬುಲ್ಸ್ ಹರಾಜಿಗೆ ಹೋಗುವ ಮುನ್ನವೇ ಸ್ಪಷ್ಟ ತಂತ್ರವನ್ನು ಹೊಂದಿತ್ತು. ಅದು ಹಲವಾರು ಸಿ ವರ್ಗದ ಆಟಗಾರರನ್ನು, ವಿಶೇಷವಾಗಿ ರೈಡರ್‌ಗಳನ್ನು ಚಾಣಕ್ಷ್ಯತನದಿಂದ ಖರೀದಿ ಮಾಡಿದೆ. ಆದ್ದರಿಂದ ಈ ಋತುವಿನಲ್ಲಿ ಅಭಿಮಾನಿಗಳ ನಿರೀಕ್ಷೆ ಗಗನಕ್ಕೆ ಮುಟ್ಟಿದೆ.

ವಿಧ್ವಂಸಕ ಯುವ ರೈಡರ್ ಗಳ ಪಡೆ!
ತರಬೇತುದಾರ ರಣಧೀರ್ ಸಿಂಗ್ ಸೆಹ್ರಾವತ್ ಅವರ ನಿರೀಕ್ಷೆಗಳನ್ನು ಪೂರೈಸಲು ಬುಲ್ಸ್‌ ನ ಸ್ಟಾರ್-ಸ್ಟಡ್ಡ್ ರೈಡರ್ ಗಳ ಪಡೆ ಸಿದ್ಧವಾಗಿದೆ. ವಿಕಾಸ್‌ ಕಂಡೋಲಾರ ಅತಿದೊಡ್ಡ ರೈಡಿಂಗ್ ಪಾಲುದಾರ ಭರತ್ ಆಗಿದ್ದು, ಅವರನ್ನು ತಂಡವು ಚಾಣಕ್ಷತನದಿಂದ ಉಳಿಸಿಕೊಂಡಿದೆ. ಮತ್ತೊಬ್ಬ ರೈಡರ್ ಜೆಬಿ ಕೂಡ ತಮ್ಮ ಅನುಭವದೊಂದಿಗೆ ಬೆಂಗಳೂರು ಬುಲ್ಸ್ ದಾಳಿಯನ್ನು ಮಾರಕವಾಗಿ ರೂಪಿಸಲಿದ್ದಾರೆ. ತಂಡವು ನೇಪಾಳದ ಸ್ಟಾರ್ ರೇಡಿಂಗ್ ಜೋಡಿಗಳಾದ ನಾಗೇಶೋರ್ ಥಾರು ಮತ್ತು ಲಾಲ್ ಮೊಹರ್ ಯಾದವ್ ಅವರ ಮೂಲ ಬೆಲೆಗೆ ಕೊಂಡುಕೊಂಡಿದೆ. ದೊಡ್ಡ ಬಿಡ್ಡಿಂಗ್ ಯುದ್ಧದ ನಂತರ ಬುಲ್ಸ್‌ ಪಾಳೆಯಕ್ಕೆ ಬಂದಿರುವ ನೀರಜ್ ನರ್ವಾಲ್ ಅವರು ದಬಾಂಗ್ ಡೆಲ್ಲಿ K. C ಗೆ ಮಾಡಿದಂತೆ ಬಲ್ಸ್‌ ಪಡೆಯಲ್ಲೂ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಡು ಆರ್‌ ಡೈ ಸ್ಪೆಷಲಿಸ್ಟ್ ಆಗಿ ಅವರು ಖಂಡಿತವಾಗಿಯೂ ವಿಕಾಶ್‌ಗೆ ಎರಡನೇ ಕಮಾಂಡರ್ ಆಗಲಿದ್ದಾರೆ.
ಆಲ್‌ ರೌಡರ್‌ ಗಳಾದ ರಾಹುಲ್ ಖಾಟಿಕ್ ಮತ್ತು ಸಚಿನ್ ನರ್ವಾಲ್ ಅವರನ್ನು ಕೊಂಡುಕೊಂಡಿದ್ದು ತಂಡದ ಸ್ಮಾರ್ಟ್‌ ಬೈ. ರಾಹುಲ್ ಖಾಟಿಕ್‌ಗೆ ಇದು ಚೊಚ್ಚಲ ಋತುವಾಗಿದ್ದರೂ, ಸಚಿನ್ ನರ್ವಾಲ್ ಅವರು ಜೈಪುರ ಪಿಂಕ್ ಪ್ಯಾಂಥರ್ಸ್‌ನೊಂದಿಗೆ ಹಿಂದಿನ ಋತುವಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ವಿಶ್ವಾಸಾರ್ಹ ರಕ್ಷಣಾ ಕೋಟೆ!
ಹರಾಜಿನಲ್ಲಿ ಬೆಂಗಳೂರು ಬುಲ್ಸ್ ತನ್ನ ಹೆಚ್ಚಿನ ಡಿಫೆಂಡರ್‌ಗಳನ್ನು ಉಳಿಸಿಕೊಂಡಿದೆ. ಬೆಂಗಳೂರು ಉಳಿಸಿಕೊಂಡ 10 ಆಟಗಾರರಲ್ಲಿ 8 ಮಂದಿ ಡಿಫೆಂಡರ್‌ಗಳಾಗಿದ್ದಾರೆ. ತಂಡವು ಎಡ ಕಾರ್ನರ್ ತಜ್ಞ ಸೌರಭ್ ನಂದಲ್ ಮತ್ತು ಡಿಫೆನ್ಸ್‌ ವಿಭಾಗವನ್ನು ಮುನ್ನಡೆಸಲು ಅನುಭವಿ ಮಹೇಂದರ್ ಸಿಂಗ್ ಅವರ ಮೇಲೆ ಹೆಚ್ಚಿನ ವಿಶ್ವಾನ ಇಟ್ಟಿದೆ. ರಕ್ಷಣೆಯನ್ನು ಬಿಗಿಗೊಳಿಸಲು ಎನ್‌ವೈಪಿ (ಹೊಸ ಯುವ ಆಟಗಾರರು) ರಜನೀಶ್, ಯಶ್ ಹೂಡಾ ಮತ್ತು ಅಮನ್‌ರಿಂದ ಬಹಳಷ್ಟು ನಿರೀಕ್ಷಿಸಲಾಗಿದೆ. ಆಟಗಾರರ ಹರಾಜಿನಲ್ಲಿ ತಂಡವು ನೀರೀಕ್ಷೆಯಿಟ್ಟು ‌ಮತ್ತೊಮ್ಮೆ ಖರೀದಿಸಿದ ಡಿಫೆಂಡರ್ ಆಗಿರುವ ಮಯೂರ್ ಕದಮ್ ಅವರಿಗೆ ಈ ಋತು ಉತ್ತಮ ಕಲಿಕೆಗೆ ವೇದಿಕೆಯಾಗಲಿದೆ.

ಬೆಂಗಳೂರು ಬುಲ್ಸ್‌ ಪಡೆ: 
ರೈಡರ್ಸ್: ವಿಕಾಸ್ ಕಾಂಡೋಲಾ, ಭರತ್, ನೀರಜ್ ನರ್ವಾಲ್, ಮೋರ್ ಜಿ ಬಿ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್.
ಡಿಫೆಂಡರ್ಸ್: ಮಯೂರ್ ಕದಮ್, ಮಹೇಂದರ್ ಸಿಂಗ್, ಅಮನ್, ಸೌರಭ್ ನಂದಲ್, ರಜನೇಶ್, ಯಶ್ ಹೂಡಾ, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್.
ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!