ಜಾತಿ ಸಂಘರ್ಷ ಸಿದ್ದರಾಮಯ್ಯನ ಕೊಡುಗೆ ಎಂದು ನಳಿನ್‌ ಕುಮಾರ್‌ ಕಟೀಲ್ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಯೋತ್ಪಾದನೆ, ಭ್ರಷ್ಟಾಚಾರವೇ ಕಾಂಗ್ರೆಸ್‍ನ ದೊಡ್ಡ ಕೊಡುಗೆ. 6 ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸದಾ ಕಾಲ ಹಗರಣಗಳನ್ನೇ ಮಾಡಿಕೊಂಡಿತ್ತು. ಶಾಸ್ತ್ರೀಜಿ ಹೊರತುಪಡಿಸಿ ಉಳಿದೆಲ್ಲ ಪ್ರಧಾನಿಗಳು ಭ್ರಷ್ಟರಾಗಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹರಿಹಾಯ್ದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಭ್ರಷ್ಟಾಚಾರ, ಸಂಘರ್ಷವನ್ನು ಎಳೆಎಳೆಯಾಗಿ ವಿವರಿಸಿದರು. ಕಾಂಗ್ರೆಸ್‌ನವರು ದೇಶ ಮಾತ್ರವಲ್ಲದೆ, ವೀರಶೈವ ಸಮಾಜವನ್ನೂ ಒಡೆಯಲು ಮುಂದಾದವರು. ಭಾರತದಿಂದ ಓಡಲು ಇಟಲಿಯ ಅಕ್ಕ(ಸೋನಿಯಾ ಗಾಂಧಿ) ದಾರಿ ಹುಡುಕುತ್ತಿದ್ದಾರೆ. ಇದು ಭಾರತ್ ಜೋಡೋ ಅಲ್ಲ,  ಇದು ಯಶಸ್ವಿ ಕೂಡಾ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಹಾಸ್ಟೆಲ್, ಹಾಸಿಗೆ, ಸೋಲಾರ್, ಶಾಲಾ ಮೊಟ್ಟೆ, ನೇಮಕಾತಿಯಲ್ಲೂ ಹಗರಣಗಳನ್ನು ಮಾಡಿ, ಜಾತಿ- ಜಾತಿಗಳ ನಡುವೆ ಸಂಘರ್ಷ ತಂದಿಟ್ಟ ಸಿದ್ದರಾಮಣ್ಣನ ಕೊಡುಗೆಯನ್ನು ರಾಜ್ಯದ ಜನರು ಮರೆತಿಲ್ಲ. ಅರ್ಕಾವತಿ ರೀಡೂ ಹಗರಣದಲ್ಲಿ ಸಿದ್ದರಾಮಣ್ಣ ಎಲ್ಲಿರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಮುನ್ಸೂಚನೆ ನೀಡಿದರು. ಕಾಂಗ್ರೆಸ್‌ನ ಕೇಂದ್ರ ಹಾಗೂ ರಾಜ್ಯದ ನಾಯಕರು ಜಾಮೀನಿನಡಿ ಹೊರಗಿದ್ದಾರೆ ಎಂದರು.

ಇನ್ನೂ ಬಿಜೆಪಿ ಮುಖಂಡರ ಪ್ರವಾಸಕ್ಕೆ ಜನರಿಂದ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚುನಾವಣಾ ಪೂರ್ವತಯಾರಿ ನಡೆಯುತ್ತಿದ್ದು, ಅದ್ಭುತ ಪ್ರತಿಕ್ರಿಯೆ ಖಚಿತ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್ ಉಚಿತ ಲಸಿಕೆ ಮೂಲಕ ಮಾಸ್ಕ್ ತೆಗೆದು ಕುಳಿತುಕೊಳ್ಳುವಂತೆ ಮಾಡಿದ ಜನಪರ ಕಾಳಜಿ ಉಳ್ಳ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು.

ಇತರ ಪಕ್ಷಗಳ ಹತ್ತಾರು ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂಬ ಸೂಚನೆ ನೀಡಿದರು. ಚುನಾವಣೆಗೆ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!