ಈ ಕುರುಬನಿಲ್ಲದಿದ್ದರೆ ಬ್ರಿಟಿಷರು ಕಲ್ಕಾ-ಶಿಮ್ಲಾ ರೈಲು ಮಾರ್ಗ ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಭಾರತೀಯ ರೈಲ್ವೆಯನ್ನು ಬಳಸುತ್ತಾರೆ. ಸುರಂಗ, ಸೇತುವೆಗಳ ಮೂಲಕ ಅಚ್ಚರಿಗೊಳಿಸುವ ಭೂಪ್ರದೇಶಗಳನ್ನು ಹೊಕ್ಕುತ್ತಾರೆ. ಭಾರತೀಯ ರೈಲ್ವೆ ಹಲವಾರು ಮಾರ್ಗಗಳು ಭಾರತದ ಉದ್ದ ಮತ್ತು ಅಗಲವನ್ನು ವ್ಯಾಪಿಸಿದೆ. ಅದರಲ್ಲಿ ಕೆಲವು ಕಡಿದಾದ ಪ್ರದೇಶಗಳಿಂದಲೂ ಕೂಡಿದೆ. ಆಗ ರೈಲ್ವೆ ಮಾರು ಸುರಂಗ ಕೊರೆಯುವುದೆಂದರೆ ಸುಲಭದ ಮಾತಾಗಿರಲಿಲ್ಲ. ಇಂದು ಜುಮ್ಮೆಂದು ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಾ ಸಾಗುವ ಅದೆಷ್ಟು ಜನರಿಗೆ ಗೊತ್ತು ಇದರ ಹಿಂದಿರುವ ನಮ್ಮವರ ಶ್ರಮ?.

ನ್ಯಾರೋ-ಗೇಜ್, ಕಲ್ಕಾ-ಶಿಮ್ಲಾ ರೈಲುಮಾರ್ಗವು ಕಡಿದಾದ ಇಳಿಜಾರನ್ನು ಹೊಂದಿದೆ. ಇದು ಸುಮಾರು 102 ಸುರಂಗಗಳ ಮೂಲಕ ಹಾದುಹೋಗುತ್ತದೆ ಎಂದು ನಿಮಗೆ ತಿಳಿದಿದೆಯೇ?. ಕೆಲವು ಭಾರತೀಯರು ಈ ಮಹೋನ್ನತ ಸಾಧನೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ ಈಗ ನಾವು ತಿಳಿಯುತ್ತಿರುವುದು ಭಾಲ್ಕು ರಾಮ್ ಎಂಬ ಕುರುಬನ ಬಗ್ಗೆ. ಅವರ ಮಾರ್ಗದರ್ಶನವು ಕಲ್ಕಾ-ಶಿಮ್ಲಾ ರೈಲ್ವೆ ಹಳಿ ಸ್ಥಾಪಿಸಲು ಬ್ರಿಟಿಷರಿಗೆ ಸಹಾಯ ಮಾಡಿತು. ಶಿಮ್ಲಾದಲ್ಲಿ ಉತ್ತರ ರೈಲ್ವೆ ಸ್ಥಾಪಿಸಿದ ಬಾಬಾ ಭಾಲ್ಕು ರೈಲು ವಸ್ತುಸಂಗ್ರಹಾಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.

ಭಾಲ್ಕು ರಾಮ್ ಕಥೆಯು 1903 ರಲ್ಲಿ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಎಸ್ ಬರೋಗ್ ಅವರ ಮೇಲ್ವಿಚಾರಣೆಯಲ್ಲಿ ಶಿಮ್ಲಾ-ಕಲ್ಕಾ ರೈಲ್ವೆ ಹಳಿಯನ್ನು ಹಾಕಿದಾಗ ಪ್ರಾರಂಭವಾಗುತ್ತದೆ. ಮಾರ್ಗದಲ್ಲಿ ಅತಿ ಉದ್ದವಾದ ಸುರಂಗವನ್ನು ರಚಿಸಲು, ಬರೋಗ್ ತನ್ನ ತಂಡವನ್ನು ಎರಡೂ ತುದಿಗಳಿಂದ ಅಗೆಯಲು ಪ್ರಾರಂಭಿಸಿದನು ಆದರೆ ಅದರ ಜೋಡಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗುತ್ತಾರೆ. ಈ ತಪ್ಪಿಗೆ ಬ್ರಿಟಿಷ್ ಸರ್ಕಾರವು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ತೀಕ್ಷ್ಣವಾದ ವಾಗ್ದಂಡನೆ ಮತ್ತು 1 ರೂ ದಂಡವನ್ನು ಕೂಡ ವಿಧಿಸುತ್ತದೆ. ಇದರಿಂದ ಕರ್ನಲ್ ಬರೋಗ್ ತುಂಬಾ ಅವಮಾನ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ. ಆದರೆ
ಅಪೂರ್ಣ ಸುರಂಗದ ಬಳಿ ಎಲ್ಲೋ ಸಮಾಧಿ ಮಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಅವರ ಉತ್ತರಾಧಿಕಾರಿ, ಮುಖ್ಯ ಇಂಜಿನಿಯರ್ ಎಚ್ಎಸ್ ಹ್ಯಾರಿಂಗ್ಟನ್ ಅವರು ಅದೇ ಸಮಸ್ಯೆಯನ್ನು ಎದುರಿಸುವ ವೇಳೆ ಆಗ ಚೈಲ್ ಬಳಿಯ ಝಾಝಾ ಗ್ರಾಮದ ಕುರುಬನಾದ ಭಾಲ್ಕು ರಾಮ್, ಹ್ಯಾರಿಂಗ್ಟನ್‌ಗೆ ಸುರಂಗವನ್ನು ನಿರ್ಮಿಸಲು ಸಹಾಯ ಮಾಡಲು ಮುಂದಾದನು. ಇವರಿಬ್ಬರ ಪರಿಚಯದ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಆದರೆ ಭಾಲ್ಕು ಬ್ರಿಟಿಷ್ ಎಂಜಿನಿಯರ್‌ಗಳ ತಂಡ ಸೇರಿ ಶೀಘ್ರದಲ್ಲೇ ಅವರಲ್ಲಿ ಪ್ರಮುಖ ವ್ಯಕ್ತಿಯಾದರು.

ಅವರ ಮಾರ್ಗದರ್ಶನದಲ್ಲಿ, ಬ್ರಿಟಿಷರು ಅಂತಿಮವಾಗಿ 1143.61 ಮೀಟರ್ ಉದ್ದದ ಸುರಂಗವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು, ಇದನ್ನು ಇಂದು ಬರೋಗ್ ಸುರಂಗ ಎಂದು ಕರೆಯಲಾಗುತ್ತದೆ (ಸಂಖ್ಯೆ 33). ಈ ಮಾರ್ಗದಲ್ಲಿ ಉಳಿದ ಸುರಂಗಗಳನ್ನು ನಿರ್ಮಿಸಲು ಭಾಲ್ಕು ಮತ್ತು ಅವರ ಅಸಾಧಾರಣ ಕೌಶಲ್ಯಗಳನ್ನು ಬಳಸಿಕೊಳ್ಳಲಾಯಿತು. ಅವರ ಪ್ರಯತ್ನಗಳಿಗಾಗಿ ಬ್ರಿಟಿಷ್ ವೈಸ್‌ರಾಯ್ ಭಾಲ್ಕು ರಾಮ್‌ಗೆ ಪದಕ ಮತ್ತು ಪೇಟವನ್ನು ಉಡುಗೊರೆಯಾಗಿ ನೀಡಿದರು. 1903 ರಲ್ಲಿ ಕಲ್ಕಾ-ಶಿಮ್ಲಾ ಟ್ರ್ಯಾಕ್ ಪೂರ್ಣಗೊಂಡ ನಂತರ ಭಾಲ್ಕು ತೀರ್ಥಯಾತ್ರೆಗೆ ಹೋದವರು ಮತ್ತೆ ವಾಪಸಾಗಲಿಲ್ಲ.

ಶಿಮ್ಲಾದ ಬಾಬಾ ಭಾಲ್ಕು ರೈಲ್ವೆ ಮ್ಯೂಸಿಯಂನಲ್ಲಿ ಹಲವಾರು ಫಲಕಗಳಿವೆ, ಅದರಲ್ಲಿ ಬ್ರಿಟಿಷ್ ಅಧಿಕಾರಿಗಳು ‘ಬಾಲ್ಕೂ’ ಮೇಲೆ ಪ್ರಜ್ವಲಿಸುವ ಪ್ರಶಂಸಾಪತ್ರಗಳನ್ನು ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!