ಕೊಡಗಿನಲ್ಲಿ ಸುರಿದ ಮಹಾಮಳೆಗೆ ಮಹಿಳೆ ಬಲಿ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಮಹಿಳೆ ಸಾವನ್ನಪ್ಪಿದ್ದಾರೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಸುಳುಗಳಲೆ ನಿವಾಸಿ ವಸಂತಮ್ಮ ಎಂಬವರೇ ಮೃತಪಟ್ಟವರಾಗಿದ್ದಾರೆ.
ಜುಲೈ 5 ರಂದು ಬಿದ್ದ ಗಾಳಿ ಮಳೆಗೆ ಸ್ನಾನಗೃಹದ ಗೋಡೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಅಸು ನೀಗಿದ್ದಾರೆ.
ಮನೆ ಕುಸಿತ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.11 ರ ನಿವಾಸಿ ಮಲ್ಲಿಗೆ ಎಂಬವರಿಗೆ ಸೇರಿದ ಹಳೇ ಮನೆ ಭಾರಿ ಗಾಳಿ- ಮಳೆಗೆ ಕುಸಿದು ಬಿದ್ದಿದೆ. ಆದರೆ, ಈ ಮನೆಯಲ್ಲಿ ಯಾರೂ ವಾಸವಿರದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ಕುಶಾಲನಗರ ಹೋಬಳಿಯ ಬೆಂಡೆಬೆಟ್ಟ ಹಾಡಿಯ ಕುರುಬರ ಜಯ ಎಂಬವರಿಗೆ ಸೇರಿದ‌ ಮನೆಯೂ ಗಾಳಿ ಮಳೆಗೆ ಹಾನಿಯಾಗಿದೆ.
ಎರಡು ಜಾನುವಾರು ಬಲಿ: ಶ್ರೀಮಂಗಲ ಹೋಬಳಿಯ ಕೆ.ಬಾಡಗ ಗ್ರಾಮದ ನಿವಾಸಿ ಜಾಯ್ ಅಯ್ಯಪ್ಪ ಅವರಿಗೆ ಸೇರಿದ ಹಸು ಮಳೆ,ಗಾಳಿ ಚಳಿಗೆ ಸಿಲುಕಿ ಸಾವಿಗೀಡಾಗಿದ್ದು, ನಾಲ್ಕೇರಿ ಗ್ರಾಮದ ನಿವಾಸಿ ಮಂಡೇಟಿರ ಪ್ರಭು ಅವರಿಗೆ ಸೇರಿದ ಹಸು ತೋಡಿಗೆ ಬಿದ್ದು ಮೃತಪಟ್ಟಿದೆ.
ಅಲ್ಪ ಬಿಡುವು ನೀಡಿದ ಮಳೆ: ಕೊಡಗು ಜಿಲ್ಲೆಯಲ್ಲಿ‌ ಶನಿವಾರ ಅಲ್ಪ ಮಟ್ಟಿಗೆ ಬಿಡುವು ನೀಡಿದೆ. ಆಗೊಮ್ಮೆ ಈಗೊಮ್ಮೆ ಬಿಸಿಲು ಇಣುಕಿದರೆ, ನಡುವೆ ರಭಸವಾದ ಮಳೆಯ ದರ್ಶನವಾಗಿತ್ತು.
ಕಾಟಕೇರಿಯಲ್ಲಿ ಭೂ ಕುಸಿತ: ಮಡಿಕೇರಿ ಸಮೀಪದ ಕಾಟಕೇರಿಯ ಬೋಪಯ್ಯ ಎಂಬವರ ಮನೆ ಬಳಿ ಭೂ ಕುಸಿತ ಸಂಭವಿಸಿದ್ದು, ಸುಮಾರು ಅರ್ಧ ಎಕರೆ ಪ್ರದೇಶದ ಕಾಫಿ ತೋಟ ಅಂದಾಜು ಹತ್ತು ಅಡಿಯಷ್ಟು ಆಳಕ್ಕೆ ಕುಸಿದಿದೆ. ಬೋಪಯ್ಯ ಅವರ ಮನೆ ಅಪಾಯದಲ್ಲಿದ್ದು, ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!