ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಎರಡನೇ ಹಂತದ ವಿಧಾನಸಭಾ ಚುನಾವಣಾ ಕಣ ಕಾವೇರಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮಾಲ್ಪುರದಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಳೆದ 15 ವರ್ಷಗಳ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಪಶ್ಚಿಮ ಬಂಗಾಳದ ಮಹಿಳೆಯರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಶಾ ಆರೋಪಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಆರ್‌ಜಿ ಕರ್ ಆಸ್ಪತ್ರೆ ಪ್ರಕರಣ, ಸಂದೇಶಖಾಲಿ ದೌರ್ಜನ್ಯ, ಕೊಲ್ಕತ್ತಾ ಕಾನೂನು ಕಾಲೇಜು ಮತ್ತು ದುರ್ಗಾಪುರ ಕಾಲೇಜುಗಳಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿದ ಅವರು, ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಹಿಂಸೆ ಎಲ್ಲೆಡೆ ಹರಡಿದೆ ಎಂದು ಕಿಡಿಕಾರಿದರು.
ಚುನಾವಣಾ ಪ್ರಚಾರದ ವೇಳೆ ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ಅವರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದರು. “ಒಬ್ಬ ಮಹಿಳಾ ಮುಖ್ಯಮಂತ್ರಿಯಾಗಿ ಮಮತಾ ದೀದಿ ಅವರು ಮಹಿಳೆಯರಿಗೆ ಸುರಕ್ಷತೆ ನೀಡಲು ವಿಫಲರಾಗಿದ್ದಾರೆ. ಮಹಿಳೆಯರು ಸಂಜೆ 7 ಗಂಟೆಯ ನಂತರ ಮನೆಯಿಂದ ಹೊರಬರಬಾರದು ಎಂದು ಅವರು ಹೇಳುತ್ತಾರೆ. ಆದರೆ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಇಂತಹ ಸ್ಥಿತಿ ಇಲ್ಲ. ಅಲ್ಲಿನ ಮುಖ್ಯಮಂತ್ರಿಗಳು ಎಂದಿಗೂ ಮಹಿಳೆಯರ ಮೇಲೆ ಇಂತಹ ನಿರ್ಬಂಧ ಹೇರಿಲ್ಲ” ಎಂದು ಅವರು ಹೇಳಿದರು.
ಬಂಗಾಳದ ಮತದಾರರಿಗೆ ಭರವಸೆ ನೀಡಿದ ಅಮಿತ್ ಶಾ, “ಮೇ 5ರ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ದಿನದ ನಂತರ ಸಣ್ಣ ಹುಡುಗಿಯರಿಂದ ಹಿಡಿದು ವಯಸ್ಸಾದ ಮಹಿಳೆಯರವರೆಗೆ ಎಲ್ಲರೂ ಮಧ್ಯರಾತ್ರಿ 1 ಗಂಟೆಯ ನಂತರವೂ ಯಾವುದೇ ಭಯವಿಲ್ಲದೆ ಸಂಚರಿಸಬಹುದು. ಯಾವುದೇ ಗೂಂಡಾ ಮಹಿಳೆಯರನ್ನು ಕೆಟ್ಟ ಕಣ್ಣಿನಿಂದ ನೋಡುವ ಧೈರ್ಯ ಮಾಡಿದರೆ, ಅವನ ಜಾಗ ಜೈಲಿನಲ್ಲಿರುತ್ತದೆ” ಎಂದು ಗುಡುಗಿದರು.



