May 10, 2026
Sunday, May 10, 2026
spot_img

ಸ್ವಾರ್ಥ ರಾಜಕಾರಣಕ್ಕೆ ಮಹಿಳಾ ಮೀಸಲಾತಿ ಮಸೂದೆ ಬಲಿ: ವಿಪಕ್ಷಗಳ ವಿರುದ್ಧ ಗುಡುಗಿದ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗದ ಕಾರಣ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಾರ್ವಜನಿಕ ಹಿತಾಸಕ್ತಿಗಿಂತ ತಮ್ಮ ಸ್ವಾರ್ಥ ರಾಜಕೀಯಕ್ಕೇ ಹೆಚ್ಚಿನ ಆದ್ಯತೆ ನೀಡಿವೆ ಎಂದು ಟೀಕಿಸಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,ನಮ್ಮ ಸರ್ಕಾರ ಮಹಿಳೆಯರ ಧ್ವನಿ ಗಟ್ಟಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿತು. ಎಲ್ಲರ ಮುಂದೆಯೂ ಮಸೂದೆಯ ಅಗತ್ಯತೆಯನ್ನು ಎಳೆಎಳೆಯಾಗಿ ತೆರೆದಿಟ್ಟೆವು. ಆದರೆ ಸಂಕುಚಿತ ಮತ್ತು ಸ್ವಾರ್ಥ ರಾಜಕೀಯದ ಕಾರಣದಿಂದಾಗಿ, ಇಂದು ನಮ್ಮ ದೇಶದ ತಾಯಂದಿರು ಮತ್ತು ಸಹೋದರಿಯರು ಕಷ್ಟ ಅನುಭವಿಸಬೇಕಾಯಿತು ಎಂದು ಬೇಸರ ಹೊರಹಾಕಿದರು.

ಮಸೂದೆಗೆ ಹಿನ್ನಡೆಯಾದಾಗ ಕಾಂಗ್ರೆಸ್‌, ಡಿಎಂಕೆ ಮತ್ತು ಎಸ್‌ಪಿ ಸೇರಿದಂತೆ ವಿರೋಧ ಪಕ್ಷಗಳು ಮೇಜುಕುಟ್ಟಿ ಸಂಭ್ರಮಿಸಿದರು. ಈ ಪಕ್ಷಗಳ ನಾಯಕರ ನಡೆಯನ್ನು ದೇಶದ ಮಹಿಳೆಯರು ಎಂದಿಗೂ ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಈ ಮಸೂದೆಯಿಂದ ಯಾರಿಗೆ ಯಾವ ನಷ್ಟವೂ ಉಂಟಾಗುತ್ತಿರಲಿಲ್ಲ. ಇದರಿಂದ ಎಲ್ಲರಿಗೂ ಲಾಭವೇ ಆಗುತ್ತಿತ್ತು. ರಾಜ್ಯಗಳ ಶಕ್ತಿಯನ್ನು ಹೆಚ್ಚಿಸುವ ಪ್ರಾಮಾಣಿಕ ಉದ್ದೇಶದಿಂದ ಮೂರು ಪ್ರಮುಖ ಮಸೂದೆಗಳನ್ನು ಜಾರಿಗೆ ತರಲು ಬಯಸಿದ್ದೆವು. ಆದರೆ ವಿಪಕ್ಷಗಳು ಮಹಿಳಾ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದ ಈ ಮಸೂದೆಯನ್ನು ವಿಫಲಗೊಳಿಸಿದವು ಎಂದು ಪ್ರಧಾನಿ ಆಕ್ರೋಶ ಹೊರಹಾಕಿದರು.

ಈ ಮಸೂದೆಯು 2029ರ ಲೋಕಸಭೆ ಚುನಾವಣೆಯಿಂದ ಜಾರಿಗೆ ಬರುವಂತೆ ವಿನ್ಯಾಸಗೊಳಿಸಲಾಗಿತ್ತು. ಈ ಮೂಲಕ ಭಾರತದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವ ಮೂಲಕ ಪ್ರಮುಖ ಕೊಡುಗೆದಾರರನ್ನಾಗಿ ಸಬಲೀಕರಣಗೊಳಿಸುವುದು ಗುರಿಯಾಗಿತ್ತು. ಆದರೆ ವಿರೋಧ ಪಕ್ಷಗಳು ಮಹಿಳೆಯರನ್ನು ಅವಮಾನಿಸಿವೆ. ಈ ದೇಶದ ಹೆಣ್ಣುಮಕ್ಕಳು ಎಂದಿಗೂ ಮರೆಯುವುದಿಲ್ಲ. ದಶಕಗಳ ಕಾಲ ಈ ಹಕ್ಕನ್ನು ನಿರಾಕರಿಸುತ್ತಾ ಬಂದಿದ್ದ ಪಕ್ಷಗಳಿಗೆ ದೇಶದ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !