August 19, 2026
Wednesday, August 19, 2026
spot_img

ಭೀಕರ ದುರಂತ: ಕಂದಕಕ್ಕೆ ಉರುಳಿದ ಕಾರು, 3 ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್-ಪಠಾನ್‌ಕೋಟ್ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರೊಂದು ನಿಯಂತ್ರಣ ತಪ್ಪಿ ಸುಮಾರು 400 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ, ಮೂರು ತಿಂಗಳ ಹಸುಗೂಸು ಹಾಗೂ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐದು ಜನರು ದುರ್ಮರಣಕ್ಕೀಡಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಮೂರು ತಿಂಗಳ ಮಗುವಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪಠಾನ್‌ಕೋಟ್‌ಗೆ ಕರೆದೊಯ್ಯುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ಐವರು ದುರ್ಮರಣ

ಮೃತರನ್ನು ಚಂಬಾ ಜಿಲ್ಲೆಯ ಗೆಹ್ರಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂರು ತಿಂಗಳ ಮಗು, ಮಗುವಿನ ತಾತ ವಚನ್ ಸಿಂಗ್ (60), ಪೋಷಕರಾದ ರಿಪುನ್ ಸಿಂಗ್ (30) ಮತ್ತು ರಿಂಪಿ ದೇವಿ ಹಾಗೂ ಮತ್ತೊಬ್ಬ ಸಂಬಂಧಿ ಕೀರ್ತಿ (23) ಮೃತ ದುರ್ದೈವಿಗಳು. ಅಪಘಾತದ ತೀವ್ರತೆಗೆ ಐವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸವಾಲಾದ ರಕ್ಷಣಾ ಕಾರ್ಯಾಚರಣೆ:

ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಅಪಘಾತ ನಡೆದ ಸ್ಥಳವು ದುರ್ಗಮವಾಗಿದ್ದರಿಂದ ಮತ್ತು ದಟ್ಟ ಕತ್ತಲೆಯಿದ್ದರಿಂದ ರಕ್ಷಣಾ ಕಾರ್ಯಾಚರಣೆ ತೀವ್ರ ಸವಾಲಾಗಿ ಪರಿಣಮಿಸಿತು. ಸ್ಥಳೀಯ ನಿವಾಸಿಗಳು ಕೂಡ ರಕ್ಷಣಾ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಮೃತದೇಹಗಳನ್ನು ಮೇಲಕ್ಕೆತ್ತಲು ಸಹಾಯ ಮಾಡಿದರು.

ಎಲ್ಲಾ ಐದು ಮೃತದೇಹಗಳನ್ನು ಕಂದಕದಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಡಾಲ್‌ಹೌಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಚಂಬಾ ಪೊಲೀಸ್ ವರಿಷ್ಠಾಧಿಕಾರಿ (SP) ವಿಜಯ್ ಸಕ್ಲಾನಿ ತಿಳಿಸಿದ್ದಾರೆ.

ಇದನ್ನೂ ಓದಿ:

ಪೊಲೀಸರ ಎಚ್ಚರಿಕೆ:

ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದಲೇ ಕಾರು ಕಂದಕಕ್ಕೆ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಿಮಾಚಲದ ಗುಡ್ಡಗಾಡು ರಸ್ತೆಗಳಲ್ಲಿ, ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಮತ್ತು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ವಾಹನ ಚಾಲನೆ ಮಾಡುವಾಗ ಸಾರ್ವಜನಿಕರು ತೀವ್ರ ಜಾಗ್ರತೆ ವಹಿಸಬೇಕು ಎಂದು ಚಂಬಾ ಪೊಲೀಸರು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !