September 27, 2026
Sunday, September 27, 2026
spot_img

ಲೋಕಸಭೆಯಲ್ಲಿ ಮತ್ತೊಮ್ಮೆ ಮಹಿಳಾ ಮೀಸಲಾತಿ ಜಾರಿ ಕಸರತ್ತು: ಈ ಬಾರಿಯಾದರೂ ಗೆಲ್ಲುತ್ತಾ ಕೇಂದ್ರ ಸರ್ಕಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಇತಿಹಾಸದಲ್ಲೇ ಅತ್ಯಂತ ಕುತೂಹಲ ಕೆರಳಿಸಿರುವ ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯುವ ಸಾಧ್ಯತೆಯಿದೆ. ಸುಮಾರು ನಾಲ್ಕು ವಾರಗಳ ಕಾಲ ನಡೆಯಲಿರುವ ಈ ಮಹತ್ವದ ಅಧಿವೇಶನದ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಡಿಸಲಿದೆ.

ಮಹಿಳಾ ಮೀಸಲಾತಿ ಮಸೂದೆ ಮರುಪರಿಚಯ

ಕಳೆದ ಏಪ್ರಿಲ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ 2/3ರಷ್ಟು ಬಹುಮತ ಸಿಗದೆ ವಿಫಲವಾಗಿದ್ದ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ ಕ್ಷೇತ್ರ ಪುನರ್‌ವಿಂಗಡನೆ ಮಸೂದೆಯನ್ನು ಕೇಂದ್ರ ಸರ್ಕಾರ ಈ ಬಾರಿ ಮತ್ತೊಮ್ಮೆ ಮಂಡಿಸಲಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವ ಈ ಬಿಲ್‌ಗೆ ಕೆಲವು ಪ್ರಮುಖ ವಿರೋಧ ಪಕ್ಷಗಳು ವಿಷಯಾಧಾರಿತ ಬೆಂಬಲ ನೀಡುವ ನಿರೀಕ್ಷೆಯಿದೆ.

ವಿಪಕ್ಷಗಳ ಆಂತರಿಕ ಬೆಂಬಲದೊಂದಿಗೆ ಈ ಬಾರಿ ಮಸೂದೆ ಅಂಗೀಕಾರ ಮಾಡಿಕೊಳ್ಳಲು ಸರ್ಕಾರ ಭರಪೂರ ಸಿದ್ಧತೆ ನಡೆಸಿದೆ.

ರೆಬೆಲ್ ಸಂಸದರ ಮೇಲೆ ಎಲ್ಲರ ಕಣ್ಣು

ಮತ್ತೊಂದೆಡೆ, ಈ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮತ್ತು ಶಿವಸೇನೆ (UBT) ಪಕ್ಷಗಳ ಬಂಡಾಯದ ಬಿಸಿ ತಟ್ಟುವ ಸಾಧ್ಯತೆಯಿದೆ. ಈಗಾಗಲೇ ತಮಗಾಗಿ ಪ್ರತ್ಯೇಕ ಗುಂಪು ಗುರುತಿಸುವಂತೆ ಕೋರಿರುವ 20 ಟಿಎಂಸಿ ಹಾಗೂ ಆರು ಶಿವಸೇನೆ (ಯುಬಿಟಿ) ಸಂಸದರ ಅರ್ಜಿಯ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತೆಗೆದುಕೊಳ್ಳಲಿರುವ ಅಂತಿಮ ನಿರ್ಧಾರದ ಮೇಲೆ ರಾಜಕೀಯ ವಲಯದ ತೀವ್ರ ಕುತೂಹಲ ನೆಟ್ಟಿದೆ.

Must Read