ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಯಡಿಯೂರಪ್ಪ ನಿರ್ಧಾರವನ್ನು ಸ್ವಾಗತಿಸಿದ ಎಸ್.ಎಂ.ಕೃಷ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ವಾಗತಿಸಿದ್ದಾರೆ .

ಯಡಿಯೂರಪ್ಪ ಅವರಿಗೆ ಪತ್ರ ಬರೆದ ಎಸ್.ಎಂ.ಕೃಷ್ಣ, ನಾಲ್ಕು ದಶಕಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡು ರೈತಾಪಿ ವರ್ಗದ ಪರವಾಗಿ ಅಹರ್ನಿಶಿ ಹೋರಾಟ ನಡೆಸಿದ ತಾವು ಚುನಾವಣಾ ರಾಜಕೀಯದಿಂದ ದೂರ ಸರಿದು ಯುವ ಸಮೂಹಕ್ಕೆ ಮಾರ್ಗದರ್ಶಕರಾಗಲು ನಿಶ್ಚಯಿಸಿರುವ ತಮ್ಮ ನಿರ್ಧಾರವನ್ನು ಸ್ವಾಗತಿಸುತ್ತೇನೆ. ರಾಜ್ಯದ ಜನರಿಗೆ ನಿಮ್ಮ ಸೇವೆ ಬೇರೆ ರೂಪದಲ್ಲಿ ದೊರೆಯಲಿ. ನಿಮ್ಮ ನಡೆ ಕರ್ನಾಟಕದ ಯುವ ಜನಾಂಗಕ್ಕೆ ದಾರಿದೀಪವಾಗಲಿ ಎಂದು ಹೇಳಿದ್ದಾರೆ.

1983ರಿಂದ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ತಮ್ಮ ಸಿದ್ದಾಂತಕ್ಕೆ ಬದ್ಧರಾಗಿ ಹಗಲಿರುಳು ಹೋರಾಡಿ ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರುವಲ್ಲಿ ತಮ್ಮ ಪಾತ್ರ ಹಿರಿದಾದ್ದು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರತಿ ಹಂತದಲ್ಲೂ ಹೋರಾಟವೇ ನಿಮ್ಮ ಜೀವನದ ಮಂತ್ರವಾಗಿಸಿಕೊಂಡು ರಾಜ್ಯದ ಎಲ್ಲಾ ಸಮುದಾಯಗಳ ಏಳಿಗೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಅಜರಾಮರಾಗಿದ್ದೀರಿ ಎಂದರು.

‘ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುಗುವುದು’ ಎನ್ನುವ ಮಟ್ಟಿಗೆ ನಿಮ್ಮ ಧ್ವನಿ ವಿಧಾನಸೌಧದಲ್ಲಿ ಮೊಳಗಿದೆ. ನಾವಿಬ್ಬರೂ ಒಂದೇ ಜಿಲ್ಲೆಯಿಂದ ಬಂದವರಾದರೂ ತಾವು ಶಿವಮೊಗ್ಗದ ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ರಾಜ್ಯದ ಸರ್ವವ್ಯಾಪಿ ಸಂಚರಿಸಿ ಪಕ್ಷನ್ನು ಅಧಿಕಾರಕ್ಕೆ ಏರಿಸಿ ಜನನಾಯಕರಾಗಿ ರೂಪುಗೊಂಡ ಹಲವು ಯುವನಾಯಕರನ್ನು ಸೃಷ್ಟಿಸಿ ಯಶಸ್ವಿ ನಾಯಕರಾಗಿ ಸಾರ್ವಜನಿಕ ಜೀವನ ಸವೆಸಿ ಇಂದು ಚುನಾವಣಾ ರಾಜಕೀಯದಿಂದ ವಿರಮಿಸುತ್ತಿರುವ ತಮಗೆ ಭಗವಂತ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಸೇವೆ ಬೇರೆ ರೂಪದಲ್ಲಿ ರಾಜ್ಯದ ಜನರಿಗೆ ದೊರೆತು ಸಮಾಜದ ಶ್ರೇಯೋಭಿವೃದ್ಧಿಗೆ ಅನುವಾಗಲಿ, ತಮ್ಮ ಮುಂದಿನ ನಡೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಎಸ್.ಎಂ.ಕೃಷ್ಣ ಅವರು ಹಾರೈಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!