Monday, September 25, 2023

Latest Posts

INSPIRING | ದೃಷ್ಟಿಯಿಲ್ಲ ಆದರೂ ಸರ್ಕಾರಿ ಕಚೇರಿಯಲ್ಲಿ ಕೆಲಸ, ಸೋಮಾರಿಗಳಿಗೆ ಪ್ರಮೋದ್ ಜೀವನವೇ ‘ಪಾಠ’

– ಶಿ.ಪ್ರ. ಬದಿಯಡ್ಕ

ಮಂಗಳೂರು: ವರನಟ, ದಿ. ಡಾ. ರಾಜ್‌ಕುಮಾರ್ ನಟಿಸಿದ ಚಲನಚಿತ್ರರಂಗದ ಮೇರು ಕೃತಿ ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಒಂದು ಹಾಡಿದೆ. ‘ಆಗದು ಎಂದು, ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ..’  ಈ ಹಾಡಿನಿಂದ ಅಂದು ಸ್ಫೂರ್ತಿ ಪಡೆದವರು ಅನೇಕರು. ಇದೇ ಮಾತು ಮಂಗಳೂರಿನ ಉರ್ವಸ್ಟೋರ್‌ನಲ್ಲಿ ವಾಸವಿರುವ ಪ್ರಮೋದ್ ನಾಯಕ್ ಅವರಿಗೆ ಅನ್ವಯಿಸುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಮೊದಲು ಇರಬೇಕಾದ್ದು ಮನಸ್ಸು ಮತ್ತು ಧೈರ್ಯ. ಪ್ರಮೋದ್‌ಗೆ ಇವೆರಡೂ ಇತ್ತು.

ಯಾರೀ ಪ್ರಮೋದ್ ?
ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಹೋದರೆ ನೀವು ಇವರನ್ನು ಕಾಣುವಿರಿ. ಕಚೇರಿಯಲ್ಲಿ ಇವರು ಮಾಡುವ ಕೆಲಸಗಳನ್ನು ನೋಡಿದರೆ ಇವರ ಕಣ್ಣುಗಳಲ್ಲಿ ದೃಷ್ಟಿ ಇಲ್ಲ ಎನ್ನುವುದನ್ನು ನೀವು ನಂಬಲಾರಿರಿ. ಹೌದು, ಪ್ರಮೋದ್ ಕಣ್ಣುಗಳಲ್ಲಿ ದೃಷ್ಟಿ ಇಲ್ಲ, ಆದರೆ ದುಡಿದು ತಿನ್ನಬೇಕೆಂಬ ಛಲ ಇದೆ. ಮೇಜಿನಿಂದ ಮೇಜಿಗೆ ಕಡತಗಳನ್ನು ಕೊಡುವುದು, ಫೋನ್ ಬಂದರೆ ಕರೆಯನ್ನು ಸ್ವೀಕರಿಸಿ ಸಂಬಂಧಪಟ್ಟವರಿಗೆ ವರ್ಗಾಯಿಸುವುದನ್ನು ಪ್ರಮೋದ್ ಲೀಲಾಜಾಲವಾಗಿ ಮಾಡುತ್ತಾರೆ.

ಪ್ರಮೋದ್ ಹುಟ್ಟು ಕುರುಡರಲ್ಲ
 ನಾಲ್ಕು ವರ್ಷವಾಗುವವರೆಗೆ ಅವರ ಕಣ್ಣುಗಳು ದೃಷ್ಟಿ ಹೊಂದಿದ್ದವು. ಆದರೆ ಐದನೇ ವಯಸಲ್ಲಿ ಯಾವುದೋ ಕಾರಣಕ್ಕೆ ದೃಷ್ಟಿ ಮಂಜಾಯಿತು. ಸ್ವಲ್ಪ ದಿನ ಮನೆಯಲ್ಲಿ ಕುಳಿತ ಪ್ರಮೋದ್, ಹೀಗೆ ಕುಳಿತುಕೊಳ್ಳುವುದು ಸರಿಯಾಗದು, ಏನಾದರೂ ಸಾಧಿಸಬೇಕು ಎಂದು 1992ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಅಂಧರ ಸಂಸ್ಥೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರಕ್ಕೆ ಸೇರಿಕೊಂಡರು. ಅಲ್ಲಿ ಅವರು ಬಲೆಗಳ ಕುರ್ಚಿ ಹೆಣೆಯುವುದು ಮೊದಲಾದ ವಿದ್ಯೆಗಳನ್ನು ಕಲಿತರು. ಅಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿ ಪ್ರಮೋದ್ ಮೊದಲ ಸ್ಥಾನದಲ್ಲಿದ್ದರು.

ಕುರ್ಚಿ ರಿಪೇರಿ ಕೆಲಸ ಖಾಲಿ ಇದೆ
ತರಬೇತಿ ಮುಗಿದ ಬಳಿಕ ಬೇರೆಯವರಿಂದ ಪಾಠ ಹೇಳಿಸಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರು. ದ್ವಿತೀಯ ದರ್ಜೆಯಲ್ಲಿ ಪಾಸೂ ಆದರು. ಅದೇ ಸಮಯದಲ್ಲಿ ದ.ಕ. ಜಿಲ್ಲಾಧಿಕಾರಿಯಾಗಿದ್ದವರು ಭರತ್‌ಲಾಲ್ ಮೀನ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುರ್ಚಿ ರಿಪೇರಿ ಕೆಲಸ ಖಾಲಿ ಇದೆ ತಿಳಿದು ಪ್ರಮೋದ್ ಅರ್ಜಿ ಸಲ್ಲಿಸಿದರು. ಸುಮಾರು 15 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದು, ಪ್ರಮೋದ್ ಅವರ ಕೆಲಸ ಕಂಡು ಜಿಲ್ಲಾಧಿಕಾರಿಯವರು ಅವರನ್ನೇ ಆರಿಸಿದರು.

ಈಗಲೂ ಅಲ್ಲಿಯೇ ಇದ್ದಾರೆ
ಹೀಗೆ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ ಪ್ರಮೋದ್ ಈಗಲೂ ಅಲ್ಲಿಯೇ ಇದ್ದಾರೆ. ಆದರೆ ಅವರ ಕೆಲಸ ಬದಲಾಗಿದೆ. ಯಾಕೆಂದರೆ ಸರಕಾರಿ ಕಚೇರಿಗಳಲ್ಲಿ ಕ್ರಮೇಣ ಬಲೆಗಳ ಕುರ್ಚಿಗಳ ಬಳಕೆ ನಿಂತು ಹೋಗಿ ಮರದ ಕುರ್ಚಿಗಳು ಬಂದವು. ಆದರೆ ಪ್ರಮೋದ್ ಅವರ ಕೆಲಸಕ್ಕೆ ಸಮಸ್ಯೆಯಾಗಲಿಲ್ಲ. ಕಚೇರಿಗೆ ಬಂದವರನ್ನು ಆತ್ಮೀಯವಾಗಿ ಮಾತನಾಡಿಸುವ ಪ್ರಮೋದ್ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ.

ಬಸ್ಸಿನಲ್ಲೇ  ಓಡಾಟ
1995ರಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭವಾದ ಪ್ರಮೋದ್ ಅವರ ಒಡನಾಟ ಈಗಲೂ ಮುಂದುವರಿದಿದೆ. ಕಚೇರಿಗೆ ಆಗಾಗ ಬರುವವರನ್ನು ಸ್ವರದಲ್ಲಿಯೇ ಗುರುತು ಪತ್ತೆ ಹಚ್ಚಿ ಮಾತನಾಡಿಸುತ್ತಾರೆ. ಉರ್ವಸ್ಟೋರ್‌ನಲ್ಲಿರುವ ಸರಕಾರಿ ವಸತಿಗೃಹದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಸ್ಸಿನಲ್ಲೇ ಬಂದು ಹೋಗಿ ಮಾಡುತ್ತಿದ್ದಾರೆ.

ಪ್ರಮೋದ್‌ಗೆ ಇಬ್ಬರು ಪುತ್ರಿಯರು
ಕುಂದಾಪುರದ ಮಂಜುನಾಥ-ಶಾಂತಾ ದಂಪತಿಯ ಎಂಟು ಮಕ್ಕಳಲ್ಲಿ ಪ್ರಮೋದ್ ಅರನೆಯವರು. 2007ರಲ್ಲಿ ಪುತ್ತೂರಿನ ರೇಖಾ ಎಂಬವರನ್ನು ವಿವಾಹವಾದ ಪ್ರಮೋದ್‌ಗೆ ಇಬ್ಬರು ಪುತ್ರಿಯರು. ಮೊದಲನೆಯವಳು ಕೀರ್ತನಾ ಕೆನರಾ ಶಾಲೆಯಲ್ಲಿ ಒಂಬತ್ತನೇ ತರಗತಿ ಕಲಿಯುತ್ತಿದ್ದಾಳೆ. ಎರಡನೇಯವಳು ಪ್ರಾರ್ಥನಾ ಅಂಗನವಾಡಿಗೆ ಹೋಗುತ್ತಿದ್ದಾಳೆ.

ಮುಖ್ಯವಾಗಿ ಬೇಕಾದ್ದು ಛಲ
ಅಂಧತ್ವಕ್ಕೆ ಯಾರೂ ಹೆದರಬೇಕಾಗಿಲ್ಲ. ಈಗ ಅಂಧರಿಗೆ ತರಬೇತಿ ನೀಡುವ ಸಾಕಷ್ಟು ತರಬೇತಿ ಸಂಸ್ಥೆಗಳಿವೆ. ಅಂಧರಿಗಾಗಿಯೇ ಮೊಬೈಲ್ ಫೋನ್‌ಗಳು, ವಾಚ್‌ಗಳು ಇವೆ. ಮುಖ್ಯವಾಗಿ ಬೇಕಾದ್ದು ಛಲ, ದೃಢವಿಶ್ವಾಸ, ಧೈರ್ಯ ಎನ್ನುವ ಪ್ರಮೋದ್, ಉತ್ತಮ ಗಾಯಕರು ಕೂಡಾ. ಸುತ್ತಮುತ್ತಲಿನ ಭಜನಾ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳುತ್ತಾರೆ. ಮನೆಯಲ್ಲೂ ಪ್ರತೀ ದಿನ ಸಂಜೆ ಮನೆಯವರೊಂದಿಗೆ ಭಜನೆ ಮಾಡುತ್ತಾರೆ.

ಸೋಮಾರಿಗಳಿಗೆ ಜೀವನ ಪಾಠ

ಸ್ಟೇಟ್ ಬ್ಯಾಂಕ್‌ನಿಂದ ಸಿಟಿಬಸ್ ನಿಲ್ದಾಣ ರದ್ದಾದ ಬಳಿಕ ಪ್ರಮೋದ್‌ಗೆ ಕಚೇರಿಗೆ ತೆರಳಲು ಸ್ವಲ್ಪ ಸಮಸ್ಯೆಯಾಗಿದೆ. ಸರ್ವಿಸ್ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮೂರ್ನಾಲ್ಕು ರಸ್ತೆಗಳನ್ನು ದಾಟಬೇಕಾಗಿದೆ. ಬಸ್ಸಿನಿಂದ ಇಳಿದ ಪ್ರಮೋದ್‌ಗೆ ಯಾರಾದರೂ ರಸ್ತೆ ದಾಟಲು ಸಹಾಯ ಮಾಡುತ್ತಾರೆ.
ದೇಹದ ಎಲ್ಲಾ ಅಂಗಗಳು ಸರಿಯಿದ್ದರೂ ಕೆಲಸ ಮಾಡದ ಸೋಮಾರಿಗಳಿಗೆ ಪ್ರಮೋದ್ ಅವರ ಜೀವನ ಪಾಠವಾಗಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!