Saturday, July 2, 2022

Latest Posts

ರಾಜಕೀಯ- ಸಮಾಜ ಒಗ್ಗೂಡಿಸುವ ಕಾರ್ಯ ನಡೆಯಬೇಕು: ಬ್ಯಾರಿ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಕೋಟ

ಹೊಸದಿಗಂತ ವರದಿ, ಕೊಡಗು
ರಾಜಕಾರಣ ಮತ್ತು ಸಾಮಾಜಿಕ ಕಳಕಳಿಯ ಸೇವೆಗಳು ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಪೂರಕವಾಗಿರಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯ ಬ್ಯಾರಿ ವೆಲ್ಫೇರ್ ಟ್ರಸ್ಟ್ ಸಹಕಾರದೊಂದಿಗೆ ನಗರದಲ್ಲಿ ನಡೆದ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಡುವುದು ಸರಕಾರ ಮತ್ತು ಸಂಘ, ಸಂಸ್ಥೆಗಳ ಕರ್ತವ್ಯವಾಗಿದೆ. ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಜೀವಂತವಿರಿಸಬೇಕೆಂದು ಅವರು ಹೇಳಿದರು.

ಕುಡಿಯುವ ನೀರು, ನಡೆಯುವ ದಾರಿ ಮತ್ತು ಸಾವು ಬದುಕಿನೊಂದಿಗೆ ಹೋರಾಡುತ್ತಿರುವವರೊಂದಿಗೆ ರಾಜಕಾರಣ ಮಾಡಬಾರದು ಎಂದು ಹಿರಿಯರು ಹೇಳಿದ್ದಾರೆ. ಇದನ್ನು ಅನುಸರಿಸುವ ಅಗತ್ಯತೆ ಇಂದಿನ ರಾಜಕಾರಣಕ್ಕಿದೆ. ಲೇಖನಿ ಮತ್ತು ಬರವಣಿಗೆಗೆ ತನ್ನದೇ ಆದ ಶಕ್ತಿಯಿದ್ದು, ಇದರಿಂದ ಇಡೀ ಸಮಾಜವನ್ನು ಪರಿವರ್ತಿಸಬಹುದಾಗಿದೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಹಣಬಲ, ರಾಜಕೀಯ ಬಲ ಮತ್ತು ತೋಳ್ಬಲಕ್ಕೆ ಇಂದು ಬೆಲೆ ಇಲ್ಲ ಎನ್ನುವುದು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗಳು ಸಾಬೀತು ಪಡಿಸಿವೆ ಎಂದರು.

ಹಾಜಬ್ಬರ ಸೇವೆಗೆ ಮೆಚ್ಚುಗೆ: ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿದ ಹರೇಕಳ ಹಾಜಬ್ಬ ಅವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದ ಸಚಿವರು, ಒಬ್ಬ ಸಾಮಾನ್ಯ ವ್ಯಕ್ತಿ ಕೂಡಾ ಶಾಲೆಯನ್ನು ಅಭಿವೃದ್ಧಿ ಪಡಿಸಬಹುದೆನ್ನುವುದಕ್ಕೆ ಹಾಜಬ್ಬ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕಕ್ಕೂ ವಿಸ್ತರಿಸಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಈ ರೀತಿಯ ಕಾರ್ಯಕ್ರಮಗಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿದೆ.ಬ್ಯಾರಿ ಅಕಾಡೆಮಿ ತನ್ನ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕ ಭಾಗಕ್ಕೂ ವ್ಯಾಪಿಸಬೇಕು. ಆ ಮೂಲಕ ಅಲ್ಲಿಯೂ ಬ್ಯಾರಿ ಸಾಹಿತ್ಯ ಬೆಳೆಯಲಿ ಎಂದು ಸಲಹೆ ನೀಡಿದರು.

ಮಂಗಳೂರಿನ ತೊಕ್ಕಟ್ಟುವಿನಲ್ಲಿ ಭವನ ನಿರ್ಮಾಣಕ್ಕೆ ಸರಕಾರ ಭೂಮಿ ನೀಡಿದೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಭವನದ ಯೋಜನೆ ರೂಪಿಸಲಾಗುವುದೆಂದು ತಿಳಿಸಿದರು. ರಾಜ್ಯದಲ್ಲಿ 30 ಲಕ್ಷ ಮಂದಿ ಬ್ಯಾರಿ ಭಾಷಿಕರಿದ್ದು, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ನಾನು ಎರಡನೇ ಬಾರಿಗೆ ಅಕಾಡೆಮಿಯ ಅಧ್ಯಕ್ಷನಾಗಿದ್ದು, ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಉತ್ತಮ ಚಟುವಟಿಕೆಗಳನ್ನು ನಡೆಸಲಾಗಿದೆ. ದಾನಿಗಳಿಂದ ಸುಮಾರು 9 ಲಕ್ಷ ರೂ.ಗಳನ್ನು ಸಂಗ್ರಹಿಸಿ ಕಿಟ್’ಗಳನ್ನು ನೀಡಲಾಗಿದೆ ಎಂದು ರಹೀಂ ಉಚ್ಚಿಲ್ ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಅಲ್ಲದೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಪ್ರದಾನ:
ಹರೇಕಳ ಹಾಜಬ್ಬ (ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ), ಹುಸೈನ್ ಕಾಟಿಪಳ್ಳ (ಬ್ಯಾರಿ ಕಲೆ ಮತ್ತು ಸಾಹಿತ್ಯ), ಡಾ.ಇ.ಕೆ.ಎ. ಸಿದ್ದೀಕ್ ಅಡ್ಡೂರ್ (ಬ್ಯಾರಿ ಸಂಸ್ಕೃತಿ ಮತ್ತು ಸಮಾಜ ಸೇವೆ) ಅವರುಗಳಿಗೆ ಸಚಿವರು, ಸಭಾಪತಿ ಹಾಗೂ ಅತಿಥಿಗಳು ಗೌರವ ಪ್ರಶಸ್ತಿ ಪ್ರದಾನ ಮಾಡಿದರು.

ಗೌರವ ಪುರಸ್ಕಾರ: 2021ನೇ ಸಾಲಿನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಅಶ್ರಫ್ ಅಪೋಲೋ (ಬ್ಯಾರಿ ಸಂಗೀತ), ಡಾ. ಕೆ.ಎ. ಮುನೀರ್ ಬಾವ (ಸಮಾಜ ಸೇವೆ), ಮರಿಯಮ್ ಫೌಝಿಯಾ ಬಿ.ಯಸ್ (ಮಹಿಳಾ ಸಾಧಕಿ), ಬ್ಯಾರಿ ಝುಲ್ಫಿ (ಯುವ ಪ್ರತಿಭೆ), ಮೊಹಮ್ಮದ್ ಬಶೀರ್ ಉಸ್ತಾದ್ (ಬ್ಯಾರಿ ದಫ್), ಮೊಹಮ್ಮದ್ ಫರಾಝ್ ಅಲಿ (ಬಾಲ ಪ್ರತಿಭೆ) ಇವರುಗಳನ್ನು ಪುರಸ್ಕರಿಸಲಾಯಿತು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸ್ಥಳೀಯ 11 ಮಂದಿ ಸಾಧಕರಾದ ಉನೈಸ್ (ಸಮಾಜ ಸೇವೆ), ಬಿ.ಎ.ಷಂಶುದ್ದೀನ್ ಮಡಿಕೇರಿ (ಸಾಹಿತ್ಯ ಕ್ಷೇತ್ರ), ಎಂ.ಇ.ಮಹಮ್ಮದ್ ಮಡಿಕೇರಿ (ಪತ್ರಿಕೋದ್ಯಮ), ಜಂಶೀರ್ (ಸಮಾಜ ಸೇವೆ), ಎಸ್.ಎಮ್ ಶರೀಫ್ (ಕಲಾ ಕ್ಷೇತ್ರ), ಅಬ್ದುಲ್ ಜಲೀಲ್ ಮಡಿಕೇರಿ (ಸಮಾಜ ಸೇವೆ), ಮೊಹಮ್ಮದ್ ಚೆರ್ದು (ಸಮಾಜ ಸೇವೆ), ಸಲೀಂ ಅಲ್ತಾಫ್ ದುಬೈ (ಸಂಘಟಕರು), ಕಲೀಲ್ ಕ್ರಿಯೇಟಿವ್ (ಸಮಾಜ ಸೇವೆ), ಡಾ. ರೆಮೀನಾ ಕೆ.ಹೆಚ್ (ವೈದ್ಯಕೀಯ ಕ್ಷೇತ್ರ), ಹಾರೀಸ್ (ಸಮಾಜ ಸೇವೆ), ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಡಿಕೇರಿ ಬ್ಯಾರಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಐ.ಮುನೀರ್ ಅಹ್ಮದ್, ಉಪಾಧ್ಯಕ್ಷ ಎಂ.ಬಿ.ನಾಸಿರ್ ಅಹ್ಮದ್, ಯುವ ಜಾಗೃತಿ ಬಳಗದ ಅಧ್ಯಕ್ಷೆ ಪ್ರಾಚಿ ಗೌಡ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿ ಹಾಗೂ ಕಮರುದ್ದೀನ್ ಸಾಲ್ಮರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss