ಉಕ್ರೇನ್ ನಲ್ಲಿ ಬಾಕಿಯಾದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಉಕ್ರೇನ್ ನಲ್ಲಿರುವ ಇನ್ನುಳಿದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಳ್ಳುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆರಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಶ್ಚಿಮ ಭಾಗದಲ್ಲಿದ್ದ ವಿದ್ಯಾರ್ಥಿಗಳು ರೊಮೆನಿಯಾ ಮೂಲಕ ಭಾರತಕ್ಕೆ ಮರಳಿದ್ದಾರೆ. ಮುಂಬೈ ಹಾಗೂ ಹೊಸದಿಲ್ಲಿಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ವಿಪತ್ತು ನಿರ್ವಹಣಾ ಇಲಾಖೆಯಿಂದಲೇ ವಿದ್ಯಾರ್ಥಿಗಳ ಪ್ರಯಾಣ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ತಿಳಿಸಿದರು.

ಉಕ್ರೇನ್ ನಿಂದ ಇನ್ನುಳಿದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ವಿದೇಶಾಂಗ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೇಂದ್ರ ಹಾಗೂ ರಾಜ್ಯದ ಸಹಾಯವಾಣಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆಗೆ ಚರ್ಚಿಸಲಾಗಿದೆ. ಉಕ್ರೇನ್ ನ ಕಾರ್ಕೈವ್ ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದು, ಅದೇ ಪ್ರದೇಶದಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲಿನ ಮೆಟ್ರೋ, ಬಂಕರ್ ಗಳಲ್ಲಿ ಬಹಳಷ್ಟು ಜನರನ್ನು ಇರಿಸಿರುವುದು ಆತಂಕದ ವಿಷಯ. ವಿದ್ಯಾರ್ಥಿಗಳ ಸುರಕ್ಷತೆಯ ಜೊತೆಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಪೂರೈಸಲು ಕೇಂದ್ರ ವಿದೇಶಾಂಗ ಸಚಿವರನ್ನು ಮನವಿ ಮಾಡಲಾಗಿದೆ. ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವ ತನಕ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಗೆ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!