ಹೊಸದಿಗಂತ ವರದಿ, ಮಡಿಕೇರಿ:
“ಸಮಾನಗೊಳಿಸು” (ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್ ನ್ನು ಕೊನೆಗಾಣಿಸೋಣ) ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನವನ್ನು ಡಿ.1 ರಂದು ಮಡಿಕೇರಿಯಲ್ಲಿ ಆಚರಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಏಡ್ಸ್ ದಿನವು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಎಂಟು ಅಧಿಕೃತ ಜಾಗತಿಕ ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಒಂದಾಗಿದೆ. ಹೆಚ್‍ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಮರಣ ಹೊಂದಿದವರಿಗೆ ಸಂತಾಪ ಸೂಚಿಸುವ ಸಲುವಾಗಿ ರಾಷ್ಟ್ರಾದ್ಯಾಂತ ವಿಶ್ವ ಏಡ್ಸ್ ದಿವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್.ಐ.ವಿ ಏಡ್ಸ್ ಕುರಿತು ಅರಿವು ಮೂಡಿಸಲಾಗುವುದು. ಅಲ್ಲದೆ ನಿಯಂತ್ರಣ ಸೇವಾ ಸೌಲಭ್ಯದ ಬಗ್ಗೆ ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸಾಮಾಜಿಕ ಸೌಲಭ್ಯಗಳು ಸೋಂಕಿತ ಸಮುದಾಯಕ್ಕೆ ಲಭ್ಯವಾಗುವಂತೆ ಸಮಾಲೋಚನೆ ಮಾಡಿ ಸರ್ಕಾರದ ಸೇವೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಗುವಂತೆ ಪ್ರೇರೆಪಿಸಲಾಗುವುದು ಎಂದರು.
ಈಗಾಗಲೇ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮುಖ್ಯವಾಹಿನಿ ಕಾರ್ಯಕ್ರಮದಡಿಯಲ್ಲಿ ಭಿತ್ತಿ ಪತ್ರಗಳು, ಪೋಸ್ಟರ್’ಗಳು, ಹೋರ್ಡಿಂಗ್‍ಗಳು, ಜಾನಪದ ಕಲಾತಂಡಗಳು ಮತ್ತು ಗೋಡೆ ಬರಹಗಳ ಮೂಲಕ ಜನ ಜಾಗೃತಿ ಆಂದೋಲವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳಿಗೆ ಆರೋಗ್ಯಕರ ನಡವಳಿಕೆ ಮತ್ತು ಹೆಚ್.ಐ.ವಿ.ಏಡ್ಸ್ ಕುರಿತು ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಹೆಚ್.ಐ.ವಿ ಉಚಿತ ಸಹಾಯವಾಣಿ ಸಂಖ್ಯೆ 1097ನ್ನು ಹೊಂದಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ 18 ಕಾಲೇಜುಗಳಲ್ಲಿ ರೆಡ್‍ರಿಬ್ಬನ್ ಕ್ಲಬ್‍ಗಳನ್ನು ಸ್ಥಾಪಿಸಿ ಹೆಚ್.ಐ.ವಿ ಏಡ್ಸ್ ಅರಿವು, ರಕ್ತದಾನ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ 44 ಐಸಿಟಿಸಿ ಕೇಂದ್ರಗಳಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆ ಕೇಂದ್ರ ಸೇರಿದಂತೆ ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಗೋಣಿಕೊಪ್ಪ ಒಳಗೊಂಡು ಒಟ್ಟು 5 ಎ.ಆರ್.ಟಿ ಕೇಂದ್ರವನ್ನು ತೆರೆಯಲಾಗಿದೆ. 7 ಇ.ಐ.ಡಿ ಹಾಗೂ ಆಶೋದಯ ಸಮಿತಿ, ಒ.ಡಿ.ಪಿ ಸ್ನೇಹಾಶ್ರಾಯ ಸಮಿತಿ ಹಾಗೂ ಸರ್ವೋದಯ ಹೆಚ್.ಐ.ವಿ ಬಾಧಿತ ಸಂಘ ಸೇರಿದಂತೆ ಮೂರು ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರಲ್ಲದೆ,, ಹೆಚ್.ಐ.ವಿ ಸೋಂಕಿತರಿಗೆ ಎ.ಆರ್.ಟಿ ಕೇಂದ್ರದಲ್ಲಿ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತಿದೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎನ್.ಆನಂದ್ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ