ಹೆಬ್ಬಾಲೆಯಲ್ಲಿ ವಿಜೃಂಭಣೆಯ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ

ಹೊಸದಿಗಂತ ವರದಿ, ಕುಶಾಲನಗರ:
ತಾಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಕಾರ್ತಿಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆಯಂದು ರಾತ್ರಿ ಶಕ್ತಿ ಸ್ವರೂಪಿಣಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಪ್ರತಿವರ್ಷದಂತೆ ಅಮ್ಮನವರ ಸನ್ನಿಧಿಯಲ್ಲಿ ಬೆಳಗ್ಗೆ 7 ಘಂಟೆಯಿಂದ ಗಣಪತಿ ಪೂಜೆ, ಪುಣಾಹಃ ರಕ್ಷಾಬಂಧನ ಧ್ವಜಾರೋಹಣ ನವಗ್ರಹ ಸ್ಥಾಪನೆ, ನವಗ್ರಹ ಪೂಜೆ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆದವು.
ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಕಾರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಯಜಮಾನ್ ಎಚ್.ಎನ್.ಬಸವರಾಜು ಹಾಗೂ ಎಚ್.ಪಿ.ರಾಜಪ್ಪ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರ ನೇತೃತ್ವದಲ್ಲಿ ನೆರವೇರಿದವು.
ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಯಿತು. ರಾತ್ರಿ 8 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಯಿತು. ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಾತ್ರಿ 10.30 ಗಂಟೆ ವೇಳೆಗೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.
ಇಷ್ಟಾರ್ಥ ನೆರವೇರಿಸು ತಾಯೇ ಎಂದು 9 ದಿವಸ ಉಪವಾಸ ವ್ರತ ಆಚರಿಸಿ ಅಂದು ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಆಗಮಿಸುವ ಭಕ್ತರು ಅಗ್ನಿಕುಂಡ ತುಳಿದು ದೇವಿಗೆ ಹಣ್ಣು, ತುಪ್ಪ ಅಭಿಷೇಕ ಮಾಡಿ ಆರ್ಶೀವಾದವನ್ನು ಪಡೆದು ದೇವಿಯ ಕೃಪೆಗೆ ಪಾತ್ರರಾದರು.
ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾಯಾತ್ರೆ ಹಬ್ಬಕ್ಕೆ ವಿಶೇಷ ಮೆರಗು ನೀಡಿತು.
ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಸಿಡಿಸುವ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯಿತು. ಈ ಹಬ್ಬಕ್ಕೆ ದೇಶ ವಿದೇಶದಲ್ಲಿ ನೆಲಸಿರುವ ಗ್ರಾಮಸ್ಥರು, ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಅನ್ನಸಂತರ್ಪಣೆ:
ದೇವಸ್ಥಾನ ಸಮಿತಿ ವತಿಯಿಂದ ರಾತ್ರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂರ್ತಪಣೆ ವ್ಯವಸ್ಥೆ ಕಲ್ಪಿಸಲಾಯಿತು.
ಜಾನಪದ ಕ್ರೀಡಾಕೂಟ:
ಮಾದರಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎತ್ತಿನ ಗಾಡಿ ಓಟ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟ ನಡೆಸಲಾಯಿತು.
ಶಾಸಕರ ಭೇಟಿ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ರಾತ್ರಿ ಶ್ರೀ ಬನಶಂಕರಿ ದೇವಾಲಯ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!