ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಅತ್ತ ಏಷ್ಯಾ ಕಪ್ ಹಾಗು ವಿಶ್ವಕಪ್ ಗೆ ಸಿದ್ಧತೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ನಿಧಾನವಾಗಿ ಚೇತರಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ರಿಷಭ್ ಪಂತ್, ಜಿಮ್‌ನಲ್ಲಿ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋವೀಗ ಸಾಕಷ್ಟು ವೈರಲ್ ಆಗಿದೆ.
ಕಳೆದ ಜುಲೈ 21ರಂದು ಬಿಸಿಸಿಐ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿತ್ತು. ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಈಗಾಗಲೇ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಈ ಇಬ್ಬರು ಏಷ್ಯಾಕಪ್ ಟೂರ್ನಿಗೂ ಆಯ್ಕೆಯಾಗಿದ್ದಾರೆ.
ಇದೀಗ ರಿಷಭ್ ಪಂತ್ ತಾವು ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಗ್ರಿಪ್, ಟ್ವಿಸ್ಟ್, ಪ್ಯಾಡಲ್. ಗುಡ್ ವೈಬ್ಸ್ ಓನ್ಲಿ'(ಹಿಡಿತ, ಟ್ವಿಸ್ಟ್ ಹಾಗೂ ತುಳಿಯುವಿಕೆ, ಒಳ್ಳೆಯ ಮೂಡ್ ಮಾತ್ರ) ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ .
ರಿಷಭ್ ಪಂತ್, ಬಹುತೇಕ ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು, ಮುಂಬರುವ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ವೇಳೆಗೆ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟಿಗ ರಿಷಭ್ ಪಂತ್ ಈಗ ಚೇತರಿಕೆ ಹಾದಿಯಲ್ಲಿದ್ದು, ಇಲ್ಲಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.