Tuesday, June 6, 2023

Latest Posts

ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ್ ಶೆಣೈ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ರಲ್ಲೊಬ್ಬರು,ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ,ವಿಶ್ವ ಕೊಂಕಣಿ ಸರ್ದಾರ್ ( ನಾಯಕ) ಎಂದೇ ಗುರುತಿಸಲ್ಪಟ್ಟಿದ್ದ ಬಸ್ತಿ ವಾಮನ್ ಶೆಣೈ( 88)
ಅವರು ಭಾನುವಾರ ಮಧ್ಯಾಹ್ನದ ವೇಳೆಗೆ ಬಂಟ್ವಾಳ ತಾ.ನ ತುಂಬೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇಬ್ಬರು ಪುತ್ರರು,ಒರ್ವ ಪುತ್ರಿ ಸಹಿತ ಬಂಧು ಬಳಗವನ್ನು ಅಗಲಿದ್ದಾರೆ.ಅವರ ಪಾರ್ಥಿವ ಶರೀರವನ್ನು (ಜನವರಿ 3 ( ಸೋಮವಾರ) ಬೆಳಿಗ್ಗೆ 9.00 ರಿಂದ 10.00 ರವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು ಬಳಿಕ ಬಂಟ್ವಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕೊಂಕಣಿ ಸಾಹಿತ್ಯ,ಕಲೆ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಕೊಂಕಣಿ ಭಾಷೆಯನ್ನು ರಾಜ್ಯಾದ್ಯಂತ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಬಸ್ತಿ ವಾಮನ ಶೆಣೈ ಅವರಿಗೆ ಸಾಕಷ್ಟು ಪ್ರಶಸ್ತಿ,ಸನ್ಮಾನಗಳು ಲಭಿಸಿವೆ.ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ,ಸ್ವಯಂನಿವೃತ್ತಿ ಪಡೆದ ಅವರು ಪೂರ್ಣವಾಗಿ ಕೊಂಕಣಿ ಸಾಹಿತ್ಯ,ಸಾಂಸ್ಕೃತಿಕ,ಭಾಷಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್,ಇಂಟಕ್ ನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಗುರುತಿಸಿಕೊಂಡಿದ್ದ ಅವರು ಬಂಟ್ವಾಳ ಎಸ್ ವಿ ಎಸ್ ವಿದ್ಯಾಸಂಸ್ಥೆಯ ಸಂಚಾಲಕರಾಗಿ,ಬಂಟ್ವಾಳ ಯಶವಂತ ವ್ಯಸಯಾಮ ಶಾಲೆಯ ಅಧ್ಯಕ್ಷರಾಗಿ,ರೋಟೆರಿಯೇನ್ ಆಗಿ ಸಾಮಾಜಿಕ ಸೇವೆಯಲ್ಲು ಗುರುತಿಸಿದ್ದರು.
1974 ರಲ್ಲಿ ಬಂಟ್ವಾಳವನ್ನು ಮುಳುಗಿಸಿದ್ದ ಪ್ರವಾಹ ಸಂದರ್ಭ ಬಸ್ತಿಯವರು ಕೈಗೊಂಡ ಸೇವಾಕಾರ್ಯಕ್ಕೆ ಪ್ರಶಸ್ತಿ ಕೂಡ ದೊರಕಿತ್ತು.
ಬಂಟ್ವಾಳದಲ್ಲಿ ಸರಸ್ವತಿ ಕಲಾಪ್ರಸಾರಕ ಸಂಘ,ಸರಸದವತಿ ಸಂಗೀತ ಶಾಲೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರಾಗಿದ್ದ ಬಸ್ತಿ ಅವರು ಕೊಂಕಣಿ ರಂಗ ಚಟುವಟಿಕೆಯಲ್ಲಿ ತೊಡಗಿಸಿ ರೋಟರಿಯೇನ್ ಜಿಲ್ಲೆಯಲ್ಲಿ ಪ್ರಶಸ್ತಿಗೂ ಭಾಜನರಾಗಿದ್ದರು. ಪೌಲ್ ಮೋರಸ್ ಅವರೊಂದಿಗೆ ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಒತ್ರಾಯಿಸಿ ರಾಜ್ಯಾದ್ಯಂತ ಜಾಥವನ್ನು ಆಯೋಜಿಸಿದ್ದರು.
1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿದ್ದ ಅವರು ವಿಶ್ವ ಕೊಂಕಣಿ ಸಮ್ಮೇಳನವನ್ನು ಆಯೋಜಿಸಿದ್ದರು.1997 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ್ದ ಅವರು ಎರಡು ಅವಧಿಗೆ ಅಧ್ಯಕ್ಷರಾಗಿ ನೇಮಕವಾಗಿದ್ದರು.2004ರಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷರಾಗಿಯು ಗುರುತಿಸಿದ್ದರು.
ಇವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಯು.ಟಿ.ಖಾದರ್ ,ಮಾಜಿ ಸಚಿವ ರಮಾನಾಥ ರೈ,ಫರಂಗಿಪೇಟೆ ಸೇವಾಂಜಲಿ ಪ್ಋಇಷ್ಠಾನದ ಆಡಳಿತ ಟ್ರಸ್ಟಿ ಕೆ.ಕೆ.ಪೂಂಜಾ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಣ್ಣುದಾನ:
ಬಸ್ತಿ ವಾಮನ ಶೆಣೈ ಅವರು ನಿಧನದ ಬಳಿಕ ತಮ್ಮ ಎರಡು ಕಣ್ಣನ್ನು ದಾನ ಮಾಡುವ ಮೂಲಕ ಸಾವಿನಲ್ಲು ಮಾನವೀಯತೆ ಮೆರೆದಿದ್ದಾರೆ. ಬಸ್ತಿ ಅವರ ಪುತ್ರರ ಅನುಮತಿಯೊಂದಿಗೆ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಅಗಮಿಸಿ ಕಣ್ಣದಾನದ ಪ್ರಕ್ರಿಯೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!