Saturday, February 4, 2023

Latest Posts

 ಜ.13 ರಂದು ವಿಶ್ವದ ಅತಿದೊಡ್ಡ ನದಿ ಕ್ರೂಸ್‌ ‘ಗಂಗಾ ವಿಲಾಸ್’ಗೆ ಚಾಲನೆ:ಏನಿದರ ವಿಶೇಷತೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನದಿಯಲ್ಲಿ ಪಯಣಿಸಿದ ಅನುಭವವನ್ನು ವರ್ಣಿಸಲಾಗದು…ಗಂಗಾ ನದಿಯಿಂದ ಅಂತಹ ಪ್ರಯಾಣ ಆರಂಭವಾದರೆ ಆಹಾ ಬ್ರಹ್ಮಪುತ್ರನನ್ನು ಚುಂಬಿಸುತ್ತಾ ನಡುನಡುವೆ ಇತರ ನದಿತೀರದ ಸ್ಥಳಗಳನ್ನು ಸ್ವಾಗತಿಸುತ್ತಾ ಅದಕ್ಕಿಂತ ಆನಂದ ಇನ್ನೇನಿದೆ? ವಿಶ್ವದ ಅತಿದೊಡ್ಡ ನದಿ ಕ್ರೂಸ್ ‌ʻಗಂಗಾ ವಿಲಾಸʼ ಇದೇ ತಿಂಗಳ 13ರಿಂದ ಲಭ್ಯವಾಗಲಿದೆ. ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಮತ್ತೊಮ್ಮೆ ಭಾರತವನ್ನು ತೋರಿಸುವ ಈ ವಿಹಾರದ ವಿಶೇಷತೆ ಬಗ್ಗೆ ತಿಳಿಯೋಣ.

ವಿಶ್ವದ ಅತಿದೊಡ್ಡ ನದಿ ವಿಹಾರ ಗಂಗಾವಿಲಾಸ್ ಇದೇ ತಿಂಗಳ 13 ರಂದು ಪವಿತ್ರ ವಾರಣಾಸಿಯ ಕಾಶಿ ವಿಶ್ವೇಶ್ವರ ಸನ್ನಿಧಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಡಗನ್ನು ಪ್ರಾರಂಭಿಸಲಿದ್ದಾರೆ. ಗಂಗಾ ವಿಲಾಸ್‌ ಇತರೆ ಹಡಗುಗಳಂತಲ್ಲ ಇದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಅದೇ… ಭಾರತೀಯತೆ, ಭಾರತೀಯ ಸಂಸ್ಕೃತಿ, ಶ್ರೀಮಂತಿಕೆ ಮತ್ತು ಆಧ್ಯಾತ್ಮಿಕ ವೈಭವವನ್ನು ಮತ್ತೊಮ್ಮೆ ಹೆಮ್ಮೆಯಿಂದ ಜಗತ್ತಿಗೆ ತೋರಿಸುವ ಉದ್ದೇಶದಿಂದ ಈ ನೌಕೆ ಪ್ರಯಾಣಿಸಲಿದೆ.

ಗಂಗಾ ವಿಲಾಸದ ವಿಶೇಷತೆಗಳು:

 • ಇದು ನದಿಗಳ ಮೂಲಕ ದೀರ್ಘ ಪ್ರಯಾಣವಾಗಿದೆ. ಒಂದಲ್ಲ, ಎರಡಲ್ಲ, 51 ದಿನಗಳ ಈ ವಿಹಾರ 3,200 ಕಿಲೋಮೀಟರ್ ಕ್ರಮಿಸಲಿದೆ
 • ಉತ್ತರ ಪ್ರದೇಶದಿಂದ ಹಿಡಿದು ಐದು ರಾಜ್ಯಗಳಲ್ಲಿ ವ್ಯಾಪಿಸಿದೆ. ಬಾಂಗ್ಲಾದೇಶದ ನೀರಿನಲ್ಲಿ ವಿಹಾರ ಮಾಡುವುದು ಈ ಹಡಗಿನ ಮತ್ತೊಂದು ವಿಶೇಷ ಆಕರ್ಷಣೆ
 • 51 ದಿನಗಳಲ್ಲಿ ಅದು 27 ನದಿಗಳನ್ನು ದಾಟುತ್ತದೆ. ಗಂಗಾನದಿಯಿಂದ ಪ್ರಾರಂಭವಾಗಿ ಅಂತಿಮವಾಗಿ ಬ್ರಹ್ಮಪುತ್ರ ನದಿಯೊಂದಿಗೆ ಕೊನೆಗೊಳ್ಳುತ್ತದೆ
 • 15 ದಿನಗಳ ಕಾಲ ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ಹಲವು ನಗರಗಳನ್ನು ಮುಟ್ಟಿ ಮತ್ತೆ ಭಾರತ ಪ್ರವೇಶಿಸಿ ಅಸ್ಸಾಂನ ದಿಬ್ರುಗಢ್ ತಲುಪಲಿದೆ
 • ಐಷಾರಾಮಿ ಜೀವನ ಸವಿಯುವ ಬದಲಿಗೆ ಗಂಗಾನದಿ ಸುತ್ತಲೂ ಇರುವ ನಾಗರೀಕತೆಯ ಬಗ್ಗೆ ತಿಳಿಹೇಳುತ್ತದೆ.
 • ಗಂಗಾನದಿ ಸುತ್ತ  ಹಿಂದೂ ಧರ್ಮ ಮಾತ್ರವಲ್ಲದೆ ಬೌದ್ಧ ಧರ್ಮವೂ ಪ್ರವರ್ಧಮಾನಕ್ಕೆ ಬಂದಿತು. ಈ ವಿಹಾರವು ನಿಮ್ಮನ್ನು ಆ ಬೇರುಗಳಿಗೆ ಹಿಂತಿರುಗಿಸುತ್ತದೆ
 • 51 ದಿನಗಳ ಸುದೀರ್ಘ ಪ್ರಯಾಣದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ. ಪ್ರತಿಯೊಂದು ಪ್ರದೇಶಕ್ಕೂ ಒಂದು ಇತಿಹಾಸವಿದೆ
 • ವಾರಣಾಸಿ, ಭಗವಾನ್ ವಿಶ್ವೇಶ್ವರನ ಜನ್ಮಸ್ಥಳ, ಸಾರನಾಥ, ಬೌದ್ಧ ಕೇಂದ್ರ, ಮಾಯಾಂಗ್, ತಾಂತ್ರಿಕ ಶಿಕ್ಷಣಕ್ಕೆ ಹೆಸರು. ವಿಶ್ವದ ಅತಿದೊಡ್ಡ ನದಿ ದ್ವೀಪವಾದ ಮಜುಲಿ, ಹಿಂದಿನ ಪಾಟಲಿಪಟ್ನಂ ಮತ್ತು ಇಂದಿನ ಪಾಟ್ನಾ ಪಾರಂಪರಿಕ ಪ್ರದೇಶಗಳ ಸುತ್ತಾಟ,  ಸುಂದರಬನ್ ಡೆಲ್ಟಾ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದೇಶದ ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಮೂಲಕ ಪ್ರವಾಸಮುಂದುವರಿಯುತ್ತದೆ
 • 62 ಮೀಟರ್ ಉದ್ದ, 12 ಮೀಟರ್ ಅಗಲದ ಹಡಗಿನಲ್ಲಿ 18 ಐಷಾರಾಮಿ ಸೂಟ್‌ಗಳಿವೆ. ಪ್ರತಿ ಸೂಟ್ ಅನ್ನು ಎರಡು ಜನರಿಗೆ ಸರಿಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಈ ಹಡಗಿನಲ್ಲಿ 80 ಜನರು ಪ್ರಯಾಣಿಸಬಹುದು. ಆದರೆ ಸದ್ಯ 36 ಮಂದಿ ಮಾತ್ರ ಯಾತ್ರೆ ನಡೆಸುತ್ತಿದ್ದಾರೆ.
 • ಪ್ರತಿಯೊಂದು ಸೂಟ್ ಬಾತ್ರೂಮ್, ಶವರ್, ಕನ್ವರ್ಟಿಬಲ್ ಬೆಡ್‌ಗಳನ್ನು ಹೊಂದಿದೆ. ಫ್ರೆಂಚ್ ಬಾಲ್ಕನಿ, ಟಿವಿ, ಹೊಗೆ ಎಚ್ಚರಿಕೆ ಇತ್ಯಾದಿ. ಒಂದೇ ಬಾರಿಗೆ 40 ಮಂದಿ ಊಟ ಮಾಡುವಂತೆ ರೆಸ್ಟೋರೆಂಟ್ ಸಿದ್ಧಪಡಿಸಲಾಗಿದೆ
 • ವಿಹಾರವು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಿಮ್, ಸ್ಪಾ, ತೆರೆದ ಗಾಳಿಯ ವೀಕ್ಷಣಾ ಡೆಕ್‌ನಂತಹ ಅನೇಕ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ.
 • ಈ ಐಷಾರಾಮಿ, ಜ್ಞಾನ, ಪ್ರಯಾಣಕ್ಕೆ ಟಿಕೆಟ್ ದರ ಕನಿಷ್ಠ 36 ಲಕ್ಷ ಶುಲ್ಕ ವಿಧಿಸಲಾಗುತ್ತಿದೆ. ಅಂದರೆ ಒಬ್ಬರಿಗೆ 18 ಲಕ್ಷ ರೂ.

ಇನ್ನೂ ಹತ್ತು ಹಲವು ವಿಶೇಷತೆ ಹೊಂದಿರುವ ಕ್ರೂಸ್‌ನ ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ಗೆ ಸೇರಿದ 32 ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ. ಇನ್ನೆರಡು ವರ್ಷಗಳವರೆಗೆ ಇದರ ಟಿಕೆಟ್ ಸಿಗುವುದಿಲ್ಲ ಎನ್ನಲಾಗಿದೆ. ಇದೇ ತಿಂಗಳ 13ರಂದು ಗಂಗಾ ವಿಲಾಸ ಯಾತ್ರೆ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಭಾಗವಹಿಸುವ ವಿದೇಶಿಗರ ಮೂಲಕ ನಮ್ಮ ದೇಶದ ಪ್ರವಾಸಿ ಸ್ಥಳಗಳ ವಿವರ ಜಗತ್ತಿಗೆ ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರಿವರ್ ಕ್ರೂಸ್ ಆರಂಭವಾದ ನಂತರ ನಮ್ಮ ದೇಶಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!