September 16, 2026
Wednesday, September 16, 2026
spot_img

ವರ್ಲ್ಡ್‌ ಮೊಬಿಲಿಟಿ ಸ್ಕೋರ್ ಔಟ್: ಯುಎಇ ನಂ.1, ಭಾರತೀಯರಿಗೆ 129 ದೇಶಗಳಿಗೆ ವೀಸಾ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಲ್ಡ್ ಸುತ್ತೋಕೆ ಪ್ಲಾನ್ ಮಾಡೋರಿಗೊಂದು ಇಂಟರೆಸ್ಟಿಂಗ್ ನ್ಯೂಸ್ ಸಿಕ್ಕಿದೆ. ಜಗತ್ತಿನಾದ್ಯಂತ ಯಾವ ದೇಶದ ಪಾಸ್‌ಪೋರ್ಟ್‌ಗೆ ಎಷ್ಟು ಪವರ್ ಇದೆ ಎಂದು ಅಳೆಯೋ ‘ಆರ್ಟನ್ ಕ್ಯಾಪಿಟಲ್’ ಅನ್ನೋ ಗ್ಲೋಬಲ್ ಸಂಸ್ಥೆ ತನ್ನ ರಿಯಲ್-ಟೈಮ್ ಪಾಸ್‌ಪೋರ್ಟ್ ಇಂಡೆಕ್ಸ್ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ಈ ಲಿಸ್ಟ್‌ನಲ್ಲಿ UAE ತನ್ನ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡು ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎನಿಸಿಕೊಂಡಿದೆ.

ಆದರೆ, ಭಾರತದ ವಿಷಯಕ್ಕೆ ಬಂದರೆ ಕೊಂಚ ಬೇಸರದ ಸಂಗತಿಯಿದೆ. 2025 ರಲ್ಲಿ 66 ನೇ ಸ್ಥಾನದಲ್ಲಿದ್ದ ಭಾರತೀಯ ಪಾಸ್‌ಪೋರ್ಟ್, ಈ ಬಾರಿ 7 ಸ್ಥಾನ ಕೆಳಗೆ ಜಾರಿ 73 ನೇ ರ‍್ಯಾಂಕ್‌ಗೆ ಬಂದಿದೆ. ಸದ್ಯ ಭಾರತದ ಜೊತೆ ಉಗಾಂಡ, ಉಜ್ಬೇಕಿಸ್ತಾನ್, ವಿಯೆಟ್ನಾಂ, ಜಿಂಬಾಬ್ವೆ ದೇಶಗಳು ಈ 73ನೇ ಸ್ಥಾನವನ್ನು ಹಂಚಿಕೊಂಡಿವೆ.

ಭಾರತದ ಪಾಸ್‌ಪೋರ್ಟ್ ಹೊಂದಿರುವವರು ಈಗ 25 ದೇಶಗಳಿಗೆ ವೀಸಾ ಇಲ್ಲದೆ ಮತ್ತು 39 ದೇಶಗಳಿಗೆ ಹೋದ ತಕ್ಷಣ ವೀಸಾ ಪಡೆದು ಪ್ರಯಾಣಿಸಬಹುದು. ಆದರೆ 129 ದೇಶಗಳಿಗೆ ಹೋಗಬೇಕೆಂದರೆ ಮುಂಚಿತವಾಗಿಯೇ ವೀಸಾ ಪಡೆಯುವುದು ಕಡ್ಡಾಯ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತೀಯರಿಗೆ ವೀಸಾ-ಆನ್-ಅರೈವಲ್ ಸಿಗೋ 5 ದೇಶಗಳು ಕಡಿಮೆಯಾಗಿದ್ದು, ವೀಸಾ ಕಡ್ಡಾಯವಿರೋ ದೇಶಗಳ ಸಂಖ್ಯೆ 4 ರಷ್ಟು ಹೆಚ್ಚಾಗಿದೆ.

ಇನ್ನೊಂದೆಡೆ, ಜಗತ್ತಿನಲ್ಲೇ ಅತ್ಯಂತ ಪವರ್‌ಫುಲ್ ಎನಿಸಿಕೊಂಡಿರೋ UAE ಪಾಸ್‌ಪೋರ್ಟ್ ಹೊಂದಿದ್ದೀರಾ? ಹಾಗಾದ್ರೆ ಯುಎಇ ಪಾಸ್‌ಪೋರ್ಟ್ ಹೊಂದಿರುವವರು ಬರೋಬ್ಬರಿ 138 ದೇಶಗಳಿಗೆ ವೀಸಾ ಇಲ್ಲದೆ ಮತ್ತು 43 ದೇಶಗಳಿಗೆ ವೀಸಾ-ಆನ್-ಅರೈವಲ್ ಪಡೆದು ಆರಾಮಾಗಿ ಹೋಗಿ ಬರಬಹುದು. ಕೇವಲ 17 ದೇಶಗಳಿಗೆ ಮಾತ್ರ ವೀಸಾ ಬೇಕು. ಇನ್ನು ಈ ಪಟ್ಟಿಯಲ್ಲಿ ಕೊನೆಯ 99 ನೇ ಸ್ಥಾನದಲ್ಲಿ ಆಫ್ಘಾನಿಸ್ತಾನ್ ಇದ್ದು, ಜಗತ್ತಿನ ಅತ್ಯಂತ ದುರ್ಬಲ ಪಾಸ್‌ಪೋರ್ಟ್ ಎನಿಸಿಕೊಂಡಿದೆ. ಇವರಿಗೆ ಕೇವಲ 6 ದೇಶಗಳಿಗೆ ಮಾತ್ರ ವೀಸಾ ರಹಿತ ಪ್ರವೇಶವಿದೆ.

ಈ ರ‍್ಯಾಂಕಿಂಗ್ ಬಗ್ಗೆ ಭಾರತ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, “ಯಾವುದೇ ಖಾಸಗಿ ಸಂಸ್ಥೆಗಳು ತಮ್ಮದೇ ಆದ ನಿಯಮಗಳನ್ನು ಇಟ್ಟುಕೊಂಡು ಮಾಡುವ ಇಂಥ ರ‍್ಯಾಂಕಿಂಗ್‌ಗಳನ್ನು ಜಾಗತಿಕ ಮಾನದಂಡವೆಂದು ಒಪ್ಪಲು ಸಾಧ್ಯವಿಲ್ಲ. ಪಾಸ್‌ಪೋರ್ಟ್ ಅಳೆಯಲು ಜಗತ್ತಿನಲ್ಲಿ ಯಾವುದೇ ಅಧಿಕೃತ ಏಕರೂಪದ ವ್ಯವಸ್ಥೆಯಿಲ್ಲ” ಎಂದು ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !