ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವದ ಅತೀ ಉದ್ದದ ಸೆಲಾ ಪಾಸ್ ‘ದ್ವಿಪಥ ಸುರಂಗ’ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣಾಚಲ ಪ್ರದೇಶದಲ್ಲಿ ನಿರ್ಮಾಣಗೊಂಡ ವಿಶ್ವದ ಅತೀ ಉದ್ದದ ಸೆಲಾ ಪಾಸ್ ದ್ವಿಪಥ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.

ಇಟಾನಗರದಲ್ಲಿ ನಡೆದ ವಿಕಾಸಿತ ಭಾರತ ವಿಕಾಸಿತ ಈಶಾನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಸಂದರ್ಭ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದರು.

ಚೀನಾ ಗಡಿ ಭಾಗದಲ್ಲಿ ವಿಶೇಷವಾಗಿ ಈಶಾನ್ಯ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗದ ಕಾರಣ ರಾಜ್ಯಗಳು ಹಿಂದುಳಿದಿತ್ತು. ಅಷ್ಟೇ ಅಲ್ಲದೇ ಗಡಿ ಭಾಗಕ್ಕೆ ಕ್ಷೀಪ್ರವಾಗಿ ಸೈನಿಕರನ್ನು ಕಳುಹಿಸುವುದು ಸವಾಲಿನ ಕೆಲಸವಾಗಿತ್ತು. ಅರುಣಾಚಲ ಪ್ರದೇಶದಲ್ಲಿ ಚೀನಾ ಆಗಾಗ ಕ್ಯಾತೆ ತೆಗೆಯುತ್ತಿದ್ದ ಹಿನ್ನೆಲೆ ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಯೋಜನೆಯ ಭಾಗವಾಗಿ ಈ ಸೆಲಾ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಚೀನಾಕ್ಕೆ ಭಾರತ ಟಕ್ಕರ್‌ ಕೊಟ್ಟಿದೆ.

ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕ ಕಲ್ಪಿಸುವ ಸೆಲಾ ಸುರಂಗವು 13,000 ಅಡಿ ಎತ್ತರದಲ್ಲಿ 825 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಡಿ ರಸ್ತೆಗಳ ಸಂಸ್ಥೆ ನಿರ್ಮಾಣ ಮಾಡಿದ್ದು, ಒಂದು ಸುರಂಗ 1,003 ಮೀಟರ್‌ ಉದ್ದವಿದ್ದರೆ ಎರಡನೇ ಸುರಂಗ 1,595 ಮೀಟರ್‌ ಉದ್ದದ ಟ್ವಿನ್‌ಟ್ಯೂಬ್‌ ಹೊಂದಿದೆ. ಈ ಈ ಯೋಜನೆ 8.6 ಕಿಮೀ ಉದ್ದದ ಎರಡು ರಸ್ತೆಗಳನ್ನೂ ಒಳಗೊಂಡಿದೆ. ಎರಡೂ ಸುರಂಗಗಳ ನಡುವೆ 1,200 ಮೀಟರ್‌ ಉದ್ದದ ಲಿಂಕ್‌ ರೋಡ್‌ ಕೂಡ ಇದೆ. ದಿನಕ್ಕೆ 3,000 ಕಾರುಗಳು ಮತ್ತು 2,000 ಟ್ರಕ್‌ಗಳು ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಸುರಂಗ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ ಗರಿಷ್ಠ ವೇಗದ ಮಿತಿ ಹೇರಲಾಗಿದೆ.

ಚೀನಾ ಗಡಿಯಲ್ಲಿರುವ ತವಾಂಗ್‌ಗೆ ಎಲ್ಲಾ ಹವಾಮಾನದಲ್ಲೂ ಈ ಸಂಪರ್ಕ ಕಲ್ಪಿಸಬಹುದು. ಇದು ಭಾರತ-ಚೀನಾ ಮಧ್ಯೆ ಇರುವ ಗಡಿ ವಾಸ್ತವ ರೇಖೆ (ಎಲ್‍ಎಸಿ) ಬಳಿಯ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆ ಸೈನಿಕರನ್ನು ಕ್ಷಿಪ್ರವಾಗಿ ಕಳುಹಿಸಲು, ಸೇನೆಯ ಭಾರೀ ಗಾತ್ರದ ವಾಹನಗಳ ಸಂಚಾರ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ನೆರವಾಗಲಿದೆ.

ಫೆಬ್ರವರಿ 2019ರಲ್ಲಿ ಪ್ರಧಾನಿ ಮೋದಿ ಈ ಯೋಜನೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!