ಭೂಮಿ ತಂತ್ರಾಂಶದಡಿ ಯಾದಗಿರಿ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ

ಹೊಸ ದಿಗಂತ ವರದಿ, ಯಾದಗಿರಿ:

ಭೂಮಿ ತಂತ್ರಾಂಶದಡಿ ಸಾರ್ವಜನಿಕರಿಂದ ಸ್ವೀಕರಿಸಿರುವ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ ನಮ್ಮ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ತೃತೀಯ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಸಾಧನೆಗೆ ತಾಲೂಕು ಕಚೇರಿಯ ಅಧಿಕಾರಿಗಳ/ ಸಿಬ್ಬಂದಿಗಳ ಸಹಕಾರ , ಕಾರ್ಯತತ್ಪರತೆಯಿಂದಾಗಿ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಪ್ರಕರಣಗಳನ್ನು ಹಂಚಿಕೆ ಮಾಡಿ ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಪರವಾನಗಿ ಭೂಮಾಪಕರ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ಭೂ ದಾಖಲೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ತ್ರೀ ಆ್ಯಂಡ್ ನೈನ್ ( 3 ಮತ್ತು 9 ಕಲಂ) ಮಿಸ್ ಮ್ಯಾಚ್, ಪೈಕಿ ಪಹಣಿ, ಮೋಜನಿ ಕಡತಗಳು, ನವೋದಯ ಆ್ಯಪ್ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸಿ ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಜನೇವರಿ- 2022 ರ ಮಾಹೆಯಲ್ಲಿ ಯಾದಗಿರಿ 08, ಸುರಪುರ 12, ಗುರುಮಿಠಕಲ್ 08, ಹುಣಸಗಿ 05 ಒಟ್ಟು 33 ಗ್ರಾಮಗಳ ಸ್ಮಶಾನ ಭೂಮಿಗಾಗಿ ಜಮೀನು ಮಂಜೂರು ಮಾಡಲಾಗಿರುತ್ತದೆ. ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇನ್ನೂ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಜಮೀನಿಗಾಗಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 10902 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದರಲ್ಲಿ 10478 ಹೆಕ್ಟರ್ 12,165 ರೈತರಿಗೆ 11 ಕೋಟಿ 74 ಲಕ್ಷ ರೂಪಾಯಿಗಳನ್ನು ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಶಹಾಪುರ ತಹಶೀಲ್ದಾರ ಮಧುರಾಜ್, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ವಡಿಗೇರಾ ತಹಶೀಲ್ದಾರ ಸುರೇಶ್ ಅಂಕಲಗಿ, ಗುರುಮಿಠಕಲ್ ತಹಶೀಲ್ದಾರ ಶರಣಬಸವ, ಹುಣಸಗಿ ತಹಶೀಲ್ದಾರ ಅಶೋಕ ಸುರಪುರಕರ್ ಹಾಗೂ ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!