September 28, 2026
Monday, September 28, 2026
spot_img

ದಸರಾ ಕಾರ್ಯಕ್ರಮದಲ್ಲಿ ತಡವಾಗಿ ಬಂದ ಯತೀಂದ್ರ: ವೇದಿಕೆಯಲ್ಲೇ ತನ್ವೀರ್ ಸೇಠ್ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ದಸರಾ ಮಹೋತ್ಸವ-2026ರ ಸಿದ್ಧತೆಗಳ ನಡುವೆ ಅರಮನೆ ಆವರಣದಲ್ಲಿ ನಡೆದ ಗಜಪಡೆಯ ಮಾವುತರು ಹಾಗೂ ಕಾವಾಡಿಗಳ ಉಪಾಹಾರ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಮಯದ ವಿಚಾರವಾಗಿ ಅಸಮಾಧಾನದ ಪ್ರಸಂಗವೊಂದು ನಡೆದಿದೆ.

ತನ್ವೀರ್ ಸೇಠ್ ಅಸಮಾಧಾನ

ಸೋಮವಾರ ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಬಂದಿದ್ದ ಮಾವುತರು ಮತ್ತು ಕಾವಾಡಿಗಳು ಸಚಿವರ ಆಗಮನಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮಾರು ಒಂದು ಗಂಟೆಯ ಬಳಿಕ ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದರು.

ಇದನ್ನೂ ಓದಿ:

ಮಾವುತರು ಹಾಗೂ ಕಾವಾಡಿಗಳಿಗೆ ಸಮಯಕ್ಕೆ ಸರಿಯಾಗಿ ಉಪಾಹಾರ ನೀಡಬೇಕೆಂದು ಒತ್ತಾಯಿಸಿದ ತನ್ವೀರ್ ಸೇಠ್, ಕಾರ್ಯಕ್ರಮದ ವಿಳಂಬದ ಬಗ್ಗೆ ಅಧಿಕಾರಿಗಳ ಬಳಿಯೂ ಬೇಸರ ವ್ಯಕ್ತಪಡಿಸಿದರು. ದಸರಾ ಆನೆಗಳ ಆರೈಕೆ ಮತ್ತು ತರಬೇತಿಯಲ್ಲಿ ತೊಡಗಿರುವ ಮಾವುತರು ಹಾಗೂ ಕಾವಾಡಿಗಳನ್ನು ಉಪಾಹಾರಕ್ಕಾಗಿ ಕಾಯಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದರು.

ಸಮಯ ಪ್ರಜ್ಞೆ ಇಲ್ವೇನ್ರೀ?

ಕಾರ್ಯಕ್ರಮ ಆರಂಭವಾಗುವುದರಲ್ಲಿ ಮತ್ತಷ್ಟು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ತನ್ವೀರ್ ಸೇಠ್ ಸ್ಥಳದಿಂದ ನಿರ್ಗಮಿಸಿದರು. ಈ ವೇಳೆ ಸಮಯ ಪಾಲನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, “ಸಮಯ ಪ್ರಜ್ಞೆ ಇಲ್ವೇನ್ರೀ? ಎಲ್ಲದಕ್ಕೂ ಒಂದು ಮಿತಿ ಇರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಜಾಯಿಷಿ ನೀಡಿದ ಯತೀಂದ್ರ ಸಿದ್ದರಾಮಯ್ಯ

ನಂತರ ಸ್ಥಳಕ್ಕೆ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯ, ವಿಳಂಬಕ್ಕೆ ತಮ್ಮದೇ ಕಾರಣವನ್ನು ವಿವರಿಸಿದರು. ಹೊಸ ಮನೆಯಲ್ಲಿ ಕೆಲವು ವ್ಯವಸ್ಥೆಗಳು ಪೂರ್ಣಗೊಂಡಿರಲಿಲ್ಲ. ಮನೆಯಲ್ಲಿ ತಾಯಿ ಇರದ ಕಾರಣ ಹಾಗೂ ಕೆಲಸಗಾರರು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಹೊರಡುವಾಗ ತಡವಾಯಿತು ಎಂದು ಅವರು ಸಮಜಾಯಿಷಿ ನೀಡಿದರು. ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ತಡವಾಗಿ ಬಂದಿಲ್ಲ ಎಂದೂ ಸ್ಪಷ್ಟಪಡಿಸಿದರು.

ನಂತರ ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾವುತರು ಮತ್ತು ಕಾವಾಡಿಗಳೊಂದಿಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿದರು.

ಮೈಸೂರು ದಸರಾ 2026ರ ಗಜಪಡೆಯ ಭಾಗವಾಗಿ ಅರಣ್ಯ ಇಲಾಖೆಯಿಂದ 12 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳೊಂದಿಗೆ ಮಾವುತರು ಮತ್ತು ಕಾವಾಡಿಗಳು ತರಬೇತಿ ಹಾಗೂ ಸಿದ್ಧತಾ ಕಾರ್ಯಗಳಲ್ಲಿ ತೊಡಗಿದ್ದಾರೆ.

Must Read