ಹೊಸದಿಗಂತ ವರದಿ ವಿಜಯಪುರ:
ಮುಸ್ಲಿಂರ ಬಗ್ಗೆ ಸಹಾನುಭೂತಿ ಇಟ್ಟುಕೊಂಡಿದ್ದು, ದುರುಪಯೋಗ ಆಗುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಹುಬ್ಬಳ್ಳಿ ಗಲಾಟೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೆಲ ಗೂಂಡಾಗಳಿಗೆ ದೇಶ ವಿರೋಧಿ ಚಟುವಟಿಕೆ ಮಾಡುವ ಸಂಘಟನೆಗಳಿಂದ ಪ್ರೋತ್ಸಾಹ ಸಿಕ್ಕಿದೆ. ಗೃಹ ಇಲಾಖೆಯಲ್ಲಿ ಸಾಕಷ್ಟು ಸಮರ್ಥ ಅಧಿಕಾರಿಗಳಿದ್ದಾರೆ. ಒಳ್ಳೆಯ ದಕ್ಷ ಅಧಿಕಾರಿಗಳಿಗೆ ಪೋಸ್ಟಿಂಗ್ ಮಾಡಬೇಕು ಎಂದರು.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟರಿದ್ದಾರೆ, ಕೆಲವೊಂದು ಅಧಿಕಾರಿಗಳು ರೊಕ್ಕ ತಿಂದು ಜಾತ್ರೆ ಮಾಡುವವರಿದ್ದಾರೆ. ಒಳ್ಳೆ ಅಧಿಕಾರಿಗಳನ್ನು ತಂದರೆ ಇಂತಹವರನ್ನು ಬಗ್ಗುಬಡೆಯುತ್ತಾರೆ. ಇವೆಲ್ಲ ಬಿಟ್ಟು ಜಾತಿ ಹಿಡಿದುಕೊಂಡು ನಮ್ಮ ಜಾತಿಯವ ಎಸ್ಪಿ, ಪಿಎಸ್ಐ ಆಗಲಿ ಅಂದರೆ, ನಿಶ್ಚಿತವಾಗಿಯೂ ಜನರಿಗೆ ನ್ಯಾಯ ಕೊಡುವುದಕ್ಕೆ ಆಗಲ್ಲ ಜೊತೆಗೆ ಈ ರೀತಿ ಅಶಾಂತಿ ತಲೆದೋರುತ್ತದೆ. ಸಿಎಂ,ಗೃಹ ಮಂತ್ರಿಗೆ ಮನವರಿಕೆ ಆಗಿದೆ. ಬಹುಶಃ ಕರ್ನಾಟಕದಲ್ಲಿ ಹುಬ್ಬಳ್ಳಿ ಗಲಾಟೆ ಕೊನೆಯದಾಗುತ್ತೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಮಠಗಳಿಗೆ ಬಿಡುಗಡೆ ಅನುದಾನದಲ್ಲೂ ಶೇ. 40 ಕಮೀಷನ್- ದಿಂಗಾಲೇಶ್ವರ ಸ್ವಾಮೀಜಿ ಆರೋಪ ಬಗ್ಗೆ ಪ್ರತಿಕ್ರಿಯಿಸಿ, ದಿಂಗಾಲೇಶ್ವರ ಸ್ವಾಮೀಜಿ ಯಾವಾಗ ಯಾರ ಕಡೆಗೆ ಆರೋಪ ಮಾಡ್ತಾರೋ? ಯಡಿಯೂರಪ್ಪರನ್ನು ಕೆಳಗಿಳಿಸಬೇಡಿ ಅಂದಿದ್ದರು. ಅವಾಗ ವೇದಿಕೆ ಮೇಲೆ ಏನು ಮಾತನಾಡಿದರು ಅನ್ನೋದು ಮಾಧ್ಯಮಗಳಲ್ಲಿ ಬಂದಿತ್ತು. ಎಲ್ಲಾ ವ್ಯವಸ್ಥೆ ಆಗಿದೆ, ಗಾಡಿ ಬಿಟ್ಟೀವಿ. ಎಲ್ಲಾ ಫುಲ್ ರೆಡೆಯಿದೆ, ಯಡಿಯೂರಪ್ಪನವರಿಗೆ ಕಾರ್ಯಕ್ರಮಕ್ಕೆ ಮನೆಗೆ ಬಂದುಬಿಡಿ ಅಂದಿದ್ದರು. ಅಂತವರು ಒಬ್ಬೊಬ್ಬರು ಇದ್ದಾರೆ ಏನ್ಮಾಡೋದು ಎಂದರು.
ಡಿಕೆಶಿ ಯತ್ನಾಳ್ ವಿರುದ್ಧ ಏಕವಚನದಲ್ಲಿ ಆರೋಪ ಬಗ್ಗೆ ಪ್ರತಿಕ್ರಿಯಿಸಿ, ಅದು ಸಂಸ್ಕೃತಿ ಮೇಲೆ ಡಿಪೆಂಡ್ ಇರುತ್ತೆ, ಯಾವಾಗ ಏನು ಮಾತನಾಡ್ತಾರೋ ? ಮೊನ್ನೆ ಈಶ್ವರಪ್ಪರನ್ನು ಜೈಲಿಗೆ ಹಾಕಿ ಅನ್ನೋ ಬದಲಿಗೆ ಯಡಿಯೂರಪ್ಪ ಜೈಲಿಗೆ ಹಾಕಿ ಅಂದಿದ್ದರು. ರಾತ್ರಿ ಗುಂಗು ಇಳಿದಿರೋದಿಲ್ಲ ಯಾರು ಏನ್ಮಾಡೋದು ಎಂದರು.