ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ವೈರ್‌ಲೆಸ್ ಇಯರ್‌ಬಡ್ ಬಳಕೆ ಸಾಮಾನ್ಯವಾಗಿದೆ. ಆದರೆ ರಾಜಸ್ಥಾನದಲ್ಲಿ ನಡೆದ ಒಂದು ಘಟನೆ ಇದೀಗ ಇವುಗಳ ಸುರಕ್ಷತೆ ಬಗ್ಗೆ ಆತಂಕ ಹುಟ್ಟಿಸಿದೆ. ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಕಿವಿಯಲ್ಲಿ ಇಯರ್‌ಬಡ್ ಬಳಸುತ್ತಿದ್ದ ವೇಳೆ ಅದು ಸ್ಫೋಟಗೊಂಡು ಗಂಭೀರ ಗಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಕಂಪನಿಯೂ ಪ್ರತಿಕ್ರಿಯೆ ನೀಡಿದೆ.
ವಿದ್ಯಾರ್ಥಿನಿ ತಮ್ಮ ಪೋಸ್ಟ್‌ನಲ್ಲಿ, JBL ಬಲಭಾಗದ ಇಯರ್‌ಬಡ್ ಕಿವಿಯಲ್ಲಿದ್ದಾಗಲೇ ಸಿಡಿದು ಕಿವಿಯ ಒಳಪರದೆಗೆ ಉರಿಯೂತ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ವೈದ್ಯರನ್ನು ಸಂಪರ್ಕಿಸಿದ್ದು, ಅವರಿಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ ಲಕ್ಷಣಗಳು ಕಂಡುಬಂದಿವೆ ಎಂದು ಪ್ರಿಸ್ಕ್ರಿಪ್ಷನ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:
ವಿದ್ಯಾರ್ಥಿನಿಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಹಲವರು ಇಯರ್‌ಬಡ್ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಇಂತಹ ಅನುಭವಗಳನ್ನು ಹಂಚಿಕೊಂಡರೆ, ಇನ್ನೂ ಕೆಲವರು ಹೆಚ್ಚು ಸಮಯ ಬಳಕೆ ಮತ್ತು ಹೆಚ್ಚಿನ ಧ್ವನಿ ಮಟ್ಟದಿಂದ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತು JBL ಸಂಸ್ಥೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣವನ್ನು ಭಾರತದ ತಂಡಕ್ಕೆ ತನಿಖೆಗಾಗಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ. ಆದರೆ ಇದು ನಿಜವಾಗಿಯೂ ಸ್ಫೋಟವೇ ಅಥವಾ ತಾಂತ್ರಿಕ ದೋಷವೇ ಎಂಬುದನ್ನು ಕಂಪನಿ ಇನ್ನೂ ದೃಢಪಡಿಸಿಲ್ಲ.



