ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಇದು ಜನಗಳಿಗೆ ನೀರು ಕೊಡುವ ಕಾರ್ಯಕ್ರಮವೋ ಅಥವಾ ಕಂಟ್ರಾಕ್ಟರ್‌ಗಳಿಗೆ ಜೇಬು ತುಂಬಿಸುವ ಕೆಲಸವೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇದು ಎತ್ತಿನಹೊಳೆ ಯೋಜನೆಯ ಹಣೆಬರ…
ಹೀಗೆಂದವರು ನಾಲ್ಕು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ವಿವಾದಿತ ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿ ಹಣವನ್ನು ಮೀಸಲಿಟ್ಟ ಎಚ್.ಡಿ. ಕುಮಾರಸ್ವಾಮಿ.
ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022-23ನೇ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಎತ್ತಿನಹೊಳೆ ಯೋಜನೆಯ ಭೂತ-ವರ್ತಮಾನ ಮತ್ತು ಭವಿಷ್ಯವನ್ನು ಸದನದ ಮುಂದೆ ಬಿಚ್ಚಿಟ್ಟರು.
ಜನಗಳ ತೆರಿಗೆ ದುಡ್ಡು, ಸಾಲ ಮಾಡಿ 3000 ಕೋಟಿ ರೂ. ಎತ್ತಿನಹೊಳೆಗೆ ಇಟ್ಟಿದ್ದಾರೆ. ಅದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಈ ವಿಚಾರ ಮಾತಾಡುತ್ತಿದ್ದೇನೆ.
ಚಿಕ್ಕಬಳ್ಳಾಪುರ ಕೋಲಾರ ಭಾಗಕ್ಕೆ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶ ಇಟ್ಟುಕೊಂಡು ಎತ್ತಿನಹೊಳೆ ಯೋಜನೆಯನ್ನು ತರಬೇಕೆಂದು ಪ್ರಥಮವಾಗಿ 2011-12ರಲ್ಲಿ ಆಗಿನ ಜಲಸಂಪನ್ಮೂಲ ಸಚಿವ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧರಿಸಿದ್ದರು. ಎತ್ತಿನಹೊಳೆಗೆ ಪಶ್ಚಿಮವಾಹಿನಿಯಾಗಿರುವ ನೇತ್ರಾವತಿಯ 3 ಉಪಹೊಳೆಗಳಿಂದ 24.01 ಟಿಎಂಸಿ ನೀರನ್ನು ಪೂರ್ವದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸುವುದು. 2012ರಲ್ಲಿ ಈ ಯೋಜನೆಯ ಮೂಲ ಅಂದಾಜು ವೆಚ್ಚ ₹ 8,323 ಕೋಟಿ ಆಗಿತ್ತು. ನಂತರ 2014ರಲ್ಲಿ ₹ 12,912.36 ಕೋಟಿಗೆ ಏರಿಕೆಯಾಯಿತು. ಲೋಕಸಭಾ ಚುನಾವಣೆ ಘೋಷಣೆಯಾಗುವ ಸಮಯದಲ್ಲಿ ಆಗಿನ ಸರಕಾರ ತರಾತುರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಿತು. ಒಂದೇ ವರ್ಷದಲ್ಲಿ ನೀರು ತರುತ್ತೇವೆ ಎಂದಿದ್ದರು.
4.2ಲಕ್ಷ ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್
2012-13ರಲ್ಲಿ ಕಾಮಗಾರಿ ಶುರುವಾಗಿದ್ದು, ಪ್ರಸಕ್ತ 8 ಅಡ್ಡಗಟ್ಟೆ (ವಿಯರ್)ಗಳನ್ನು ಕಟ್ಟಿದ್ದಾರೆ. ಜಾಕ್‌ವೆಲ್, ಪಂಪ್‌ಹೌಸ್, ರೈಸಿಂಗ್ ಮೈನ್ ಪೈಪ್‌ಲೈನ್… ಇದೆಲ್ಲ ಹೆಚ್ಚು ಕಡಿಮೆ ಪೂರ್ಣಗೊಂಡಿದೆ. ಅದರ ಜೊತೆಗೆ 4.2 ಲಕ್ಷ ಎಚ್‌ಪಿ ಸಾಮರ್ಥ್ಯದ 43 ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ಪಶ್ಚಿಮಘಟ್ಟದಿಂದ ನೀರನ್ನು ಹೇಮಾವತಿ ನದಿ ದಾಟಿಸುವ ಪೈಪ್‌ಲೈನ್ ಕೂಡ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 262 ಕಿ.ಮೀ. ಗುರುತ್ವ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಡಿಪಿಆರ್‌ನಲ್ಲಿ ಲೈನ್ ಎಸ್ಟಿಮೇಟ್ ಅನ್ನು ಬೇಕು ಬೇಕಾದಂತೆ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ವಾಸ್ತವಾಂಶ.
ಇತ್ಯರ್ಥವಾಗಿಲ್ಲ ಭೂಸ್ವಾಧೀನ ಪರಿಹಾರ ಮೊತ್ತ
ದೇವರಾಯನದುರ್ಗದಲ್ಲಿ 10 ಟಿಎಂಸಿ ನೀರು ಸಂಗ್ರಹಿಸುವ ರಿಸರ್ವ್‌ವಿಯರ್ (ಜಲಾಶಯ) ನಿರ್ಮಾಣ ಮಾಡಬೇಕೆಂದು ಮೊದಲು ಯೋಜಿಸಲಾಗಿತ್ತು. ಅಲ್ಲಿ 400-500 ಹೆಕ್ಟೇರ್ ಅರಣ್ಯ ಭೂಮಿ ಇದೆಯೆಂದು ಅದನ್ನು ಕೈಬಿಟ್ಟು, ಕೊರಟಗೆರೆಯ ಬೈರಗೊಂಡ್ಲು ಎಂಬಲ್ಲಿ 5.78 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಬೈರಗೊಂಡ್ಲುವಿನಲ್ಲಿ ನಿರ್ಮಿಸುವ ಜಲಾಶಯದ 5000 ಎಕರೆ ಭೂಮಿ ಕೊರಟಗೆರೆ ತಾಲೂಕಿನಲ್ಲಿ ಮತ್ತು 2000 ಎಕರೆ ಜಮೀನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬರುತ್ತದೆ. ದೊಡ್ಡಬಳ್ಳಾಪುರದವರು ಭೂಸ್ವಾಧೀನ ಪರಿಹಾರ ಮೊತ್ತವನ್ನು ಎಕರೆಗೆ ₹ 32ಲಕ್ಷ ಕೇಳುತ್ತಿದ್ದಾರೆ, ಕೊರಟಗೆರೆಗೆ ₹ 8ಲಕ್ಷ ನಿಗದಿಗೊಳಿಸಲಾಗಿದೆ. ಅವರೂ ₹ 32ಲಕ್ಷ ಕೇಳುತ್ತಿದ್ದಾರೆ. ಇದು ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ದಿನಗಳಿಂದಲೂ ಸಭೆ ಮಾಡಿದ್ದೇವೆ. ಆದರೂ ಇನ್ನೂ ಇತ್ಯರ್ಥವಾಗಿಲ್ಲ. ರೈತರ ಭೂಮಿಯನ್ನು ಸ್ವಾಧೀನ ಮಾಡಿದಾಗ ಪರಿಹಾರ ನೀಡಲು ಹಣಬಿಡುಗಡೆ ಮಾಡಲು ಆಸಕ್ತಿ ಇಲ್ಲ.
ಕಡಿಮೆಯಾಗಲಿದೆಯೇ ಜಲಾಶಯ ಸಾಮರ್ಥ್ಯ?
ಬೈರಗೊಂಡ್ಲುವಿನಲ್ಲಿ 5.78 ಟಿಎಂಸಿ ನೀರನ್ನು ಶೇಖರಣೆ ಮಾಡಲು ಭೂಸ್ವಾಧೀನಕ್ಕೆ ಹೆಚ್ಚು ಹಣದ ಆವಶ್ಯಕತೆ ಇರುವುದರಿಂದ ಅಲ್ಲಿನ ಜಲಾಶಯದಲ್ಲಿ 2 ಟಿಎಂಸಿ ನೀರನ್ನು ಸಂಗ್ರಹ ಮಾಡಿದರೆ ಸಾಕು ಎಂಬ ಚರ್ಚೆ ಆಗುತ್ತಿದೆ. ಗುರುತ್ವ ಕಾಲುವೆಯಲ್ಲಿ 15 ಡೆಲಿವರಿ ಪಾಯಿಂಟ್‌ಗಳಿವೆ. ಅವುಗಳ ಮೂಲಕ ತುಮಕೂರು, ರಾಮನಗರ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ನೀರು ಕೊಡುವ ಯೋಜನೆ ಇದೆ. ಅದಕ್ಕೆ 14 ಟಿಎಂಸಿ ನೀರಿನ ಆವಶ್ಯಕತೆ ಇದೆ. ಈ ಪ್ರದೇಶಗಳಿಗೆ ನೀರು ಕೊಟ್ಟರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರೇ ಸಿಗುವುದಿಲ್ಲ. ಅಲ್ಲದೇ ತೆರೆದ ಗುರುತ್ವ ಕಾಲುವೆ ಆಗಿರುವುದರಿಂದ ಕೃಷಿಗೆ ನೀರಿನ ಕಳವು ಆಗುವ ಸಾಧ್ಯತೆ ಹೆಚ್ಚಾಗಿದೆ. ಕೋಲಾರ-ಚಿಕ್ಕಬಳ್ಳಾಪುರಕ್ಕೆ 2 ಟಿಎಂಸಿ ನೀರು ಪೂರೈಸುವ ಚರ್ಚೆ ನಡೆಸಲಾಗುತ್ತಿದೆ. ಆಗ ಯೋಜನೆ ಮೂಲ ಉದ್ದೇಶ ಹೇಗೆ ಈಡೇರುತ್ತದೆ? ಡೆಲಿವರಿ ಪಾಯಿಂಟ್‌ಗಳನ್ನು ಮುಚ್ಚದೇ ಒಂದೇ ಬಾರಿ 43 ಪಂಪ್‌ಸೆಟ್‌ಗಳನ್ನು ನಡೆಸಲು ಸಾಧ್ಯವೇ?
ಸಿಡಬ್ಲ್ಯೂಸಿ ಖಾಲಿ ಪೈಪು ಎಂದು ಹೇಳಿದೆ
ಸಿದ್ದರಾಮಯ್ಯ ಸರಕಾರ 2014ರಲ್ಲಿ ಶಂಕು ಸ್ಥಾಪನೆ ಮಾಡಿ, ಒಂದೇ ವರ್ಷದಲ್ಲಿ ನೀರು ಕೊಡುತ್ತಾರೆ ಅಂದಿದ್ರು. ಆಗ ನಾನು ಒಂದು ವರ್ಷದಲ್ಲಿ ನೀರು ತಂದ್ರೆ ತಲೆಬೋಳಿಸಿಕೊಳ್ಳುತ್ತೇನೆಂದು ಹೇಳಿದ್ದೆ. ಆಗ ಅವನ ತಲೆಯಲ್ಲಿ ಕೂದಲಿಲ್ಲ, ಅವನೆಲ್ಲಿ ತಲೆ ಬೋಳಿಸಿಕೊಳ್ಳುತ್ತಾನೆ ಅಂದ್ರು. ಇದೇ ಪರಿಸ್ಥಿತಿ ಇರುತ್ತದೆ ಅಂತ ಅವತ್ತೇ ಗೊತ್ತಿತ್ತು. ಸಿಡಬ್ಲ್ಯೂಸಿ (ರಾಷ್ಟ್ರೀಯ ಜಲ ಮಂಡಳಿ) 2012ರಲ್ಲಿಯೇ ಎತ್ತಿನಹೊಳೆಯಲ್ಲಿ ಅವಶ್ಯ ಹರಿವು ಇಲ್ಲವೆಂದು ಅಸೆಸ್ಮೆಂಟ್ ಕೊಟ್ಟಿದೆ. ಉದ್ದೇಶಿತ 24.01 ಟಿಎಂಸಿ ನೀರಿಗಿಂತ ಅತೀ ಕಡಿಮೆ ನೀರು ಲಭ್ಯವಾಗಲಿದೆ. ಆದ್ದರಿಂದ ಖಾಲಿ ಪೈಪುಗಳನ್ನಷ್ಟೇ ಕಾಣಬಹುದು, ನೀರು ಲಭ್ಯವಾಗುವುದಿಲ್ಲ ಎಂದು ಸಿಡಬ್ಲ್ಯೂಸಿ ಹೇಳಿದೆ. ಇದು ನನ್ನ ವೌಲ್ಯಮಾಪನವಲ್ಲ.
ಪೂರ್ತಿ ಹಣ ಬಿಡುಗಡೆಗೆ ಇನ್ನೆಷ್ಟು ವರ್ಷ ಬೇಕು?
ಯೋಜನೆಯ ಅಂದಾಜು ವೆಚ್ಚ ಇದ್ದದ್ದು ₹ 8,323 ಕೋಟಿ. ಸರಕಾರ ಪ್ರಸಕ್ತ ಯೋಜನೆಯ ಪರಿಷ್ಕೃತ ವೆಚ್ಚ ₹ 25,000 ಕೋಟಿ ಎಂದು ಹೇಳುತ್ತಿದೆ. ಈಗಾಗಲೇ ₹ 8500 ಕೋಟಿ ವೆಚ್ಚ ಆಗಿದೆ. ಇನ್ನೂ ₹ 16,500 ಕೋಟಿ ಬಾಕಿ ಇದೆ. ಈ ವರ್ಷ ₹ 3000 ಕೋಟಿ ಮೀಸಲಿಟ್ಟಿದೆ. ಈ ಲೆಕ್ಕಾಚಾರದಲ್ಲಿ ಆ ಹಣ ಬಿಡುಗಡೆಗೆ ಇನ್ನು ಎಷ್ಟು ವರ್ಷಗಳು ಬೇಕು? 5.78 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ವಿಳಂಬವಾಗುವುದಕ್ಕೆ ಅವಕಾಶ ಮಾಡುವುದು ಬೇಡ, ಜನಕ್ಕೆ ಮೋಸ ಆಗುವುದು ಬೇಡ. ಆದರೆ ಈ ಯೋಜನೆಯ ಹಣೆಬರ ಏನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಪ್ರತಿಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆಯ ವಿವರಗಳನ್ನು ವಿಸ್ತೃತವಾಗಿ ಸದನದ ಮುಂದಿಟ್ಟರು.
ಬೈರಗೊಂಡ್ಲು ಜಯಲಾಶಯದ ಸಾಮರ್ಥ್ಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಎತ್ತಿನಹೊಳೆ ಯೋಜನೆಯಲ್ಲಿ 527 ಕೆರೆಗಳನ್ನು ತುಂಬ ಬೇಕಾಗಿದೆ. ಜಲಾಶಯ ನಿರ್ಮಾಣಕ್ಕೆ ರೈತರು ಒಪ್ಪದೇ ಇರುವುದರಿಂದ ಅವುಗಳನ್ನು ನೇರವಾಗಿ ತುಂಬಿಸುತ್ತೇವೆ. ಹಾಗಾಗಿ ಬೈರಗೊಂಡ್ಲು ಜಲಾಶಯದ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಹೇಳಿದರು. ಇದೇ ವೇಳೆ ಯೋಜನೆಯಲ್ಲಿ 4.2ಲಕ್ಷ ಎಚ್‌ಪಿ ಸಾಮರ್ಥ್ಯದ 43 ಪಂಪ್‌ಸೆಟ್‌ಗಳಿಗೆ 219 ಮೆಗಾವ್ಯಾಟ್ ವಿದ್ಯುತ್ ಆವಶ್ಯಕತೆ ಇದೆ ಎಂದು ತಿಳಿಸಿದರು.