June 21, 2026
Sunday, June 21, 2026
spot_img

ಯೋಗವೇ ಆರೋಗ್ಯದ ಆಧಾರ: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಕೆ.ಎಸ್. ನವೀನ್ ಕರೆ

ಹೊಸದಿಗಂತ ವರದಿ ಚಿತ್ರದುರ್ಗ:

ಯೋಗದಿಂದ ವೈಯಕ್ತಿಕ ಆರೋಗ್ಯ ಜೊತೆಗೆ, ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಬಾರಿಯ ಯೋಗ ದಿನಾಚರಣೆ ಘೋಷ ವಾಕ್ಯ, ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬುದು ಅತ್ಯಂತ ಅರ್ಥಪೂರ್ಣವಾಗಿದೆ. ಯೌವ್ವನ ಹಾಗೂ ಮಧ್ಯ ವಯಸ್ಸಿನಲ್ಲಿ ಇರುವಾಗ ನಾವು ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಆದರೆ ವಯಸ್ಸಾದ ನಂತರ ಎದುರಾಗುವ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಂದಾಗಿ ನೆಮ್ಮದಿ ಕಳೆದುಕೊಳ್ಳುತ್ತೇವೆ. ವೃದ್ಧಾಪ್ಯದಲ್ಲಿ ಬರುವ ರೋಗಗಳಿಗಾಗಿ ಇಡೀ ಜೀವನದ ಗಳಿಕೆಯನ್ನು ಆಸ್ಪತ್ರೆಗಳಿಗೆ ವ್ಯಯಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದರ ಬದಲು ಆರಂಭದಲ್ಲಿ ಪ್ರತಿನಿತ್ಯ ಯೋಗ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡರೇ, ವೃದ್ಧಾಪ್ಯ ಸಂತಸಕರವಾಗಿರಲಿದೆ ಎಂದು ಕೆ.ಎಸ್. ನವೀನ್ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಯೋಗ ಸಂಸ್ಥೆಗಳು ನಿರಂತರವಾಗಿ ಯೋಗ ಪ್ರಸಾರದಲ್ಲಿ ತೊಡಗಿವೆ. ಕೇವಲ ಜೂನ್ 21ರಂದು ಮಾತ್ರ ಯೋಗ ಮಾಡುವುದಕ್ಕೆ ಸೀಮಿತವಾಗದೆ, ವರ್ಷದ 365 ದಿನಗಳೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಇದಕ್ಕಾಗಿ ಶಾಲಾ-ಕಾಲೇಜುಗಳ ಬೇಸಿಗೆ ರಜೆಯ ಅವಧಿಯಿಂದಲೇ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಮುಂದಿನ ವರ್ಷ ಕನಿಷ್ಠ 5,000 ಜನರನ್ನು ಸೇರಿಸಿ ಬೃಹತ್ ಯೋಗ ದಿನಾಚರಣೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಬೇಕು ಎಂದು ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಕೆ.ಎಸ್.ನವೀನ್ ಮನವಿ ಮಾಡಿದರು.

ಸಾಮೂಹಿಕ ಯೋಗಭ್ಯಾಸ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಯೋಗವನ್ನು ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ರೂಢಿಸಿಕೊಳ್ಳಬೇಕು. ಬದಲಾಗುತ್ತಿರುವ ಇಂದಿನ ಜೀವನ ಶೈಲಿಯಲ್ಲಿ ಜೀವನ 20-20 ಮ್ಯಾಚ್‍ನಂತೆ ವೇಗವಾಗಿಬಿಟ್ಟಿದೆ. ಹಿಂದೆ ನೂರು ವರ್ಷ ಬದುಕುತ್ತಿದ್ದ ನಮಗೆ, ಈಗ 50-60 ವರ್ಷ ಬದುಕುವುದು ಕಷ್ಟವಾಗುತ್ತಿದೆ. ಇನ್ನು 30 ವರ್ಷದ ಯುವಕರಿಗೆ ಹೃದಯಾಘಾತ ಹಾಗೂ ಇತರ ಕಾಯಿಲೆಗಳು ಬಲಿಯಾಗುತ್ತಿರುವುದು ಆತಂಕಕಾರಿಯಾಗಿದೆ.

ಯುವಜನತೆ ಯೋಗದ ಕಡೆಗೆ ತಮ್ಮ ಮನಸ್ಸು ಹಾಗೂ ಧ್ಯಾನವನ್ನು ಹರಿಸಬೇಕು. ಯೋಗದ ಮೂಲಕ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದರು.

ಇದನ್ನೂ ಓದಿ:

ಆಯುಷ್ ವೈದ್ಯಾಧಿಕಾರಿ ನಾರದಮುನಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗವು ಭಾರತದ ನೆಲ ಜಗತ್ತಿಗೆ ನೀಡಿದ ಅತ್ಯಂತ ಅವಿಸ್ಮರಣೀಯ ಕೊಡುಗೆಯಾಗಿದೆ. ಪ್ರಸ್ತುತ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ ಕಾರ್ಡಿಯೋ, ಕಾರ್ಸಿನೋ ಹಾಗೂ ಮಾನಸಿಕ ಯೋಗ ಎಂಬ ಶೀರ್ಷಿಕೆಗಳ ಅಡಿಯಲ್ಲಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಡಿಆರ್‌ಡಿಓ ಸಂಸ್ಥೆಯಲ್ಲಿ ವಿಜ್ಞಾನ ಯೋಗ ವಿನೂತನಕ ಕಾರ್ಯಕ್ರಮ ಆಯೋಜಿಸಲಾಗಿದೆ. ವರ್ಷದ 365 ದಿನಗಳೂ ಯೋಗ ಮಾಡಲು ಉತ್ತೇಜನ ನೀಡುವ ‘ಯೋಗ ಫಾರ್ 365 ಡೇಸ್’ ಎಂಬ ವಿಶೇಷ ಕಾರ್ಯಕ್ರಮದಡಿ ಆನ್‍ಲೈನ್ ಲಿಂಕ್ ಮೂಲಕ ಸಾರ್ವಜನಿಕರು ಯೋಗ ಸಾಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪತ್ರಿಜ್ಞಾ ವಿಧಿ ಸ್ವೀಕಾರ:

ವೇದಿಕೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ, ಮಾದಕ ಪದಾರ್ಥಗಳ ದುರ್ಬಳಕೆ ವಿರುದ್ದ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಬಸವರಾಜ ಸಾಮೂಹಿಕ ಯೋಗಭ್ಯಾಸ ಆಸನಗಳನ್ನು ಬೋಧಿಸುವ ಮೂಲಕ ಯೋಗದ ಮಹತ್ವ ತಿಳಿಸಿದರು. ಸಾವಿರಾರು ಯೋಗಾಸಕ್ತರು ಸುಮಾರು 45 ನಿಮಿಷಗಳ ಕಾಲ ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ವಿಶೇಷ ಯೋಗ ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕಾಶಿ, ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಅಂಗವಿಕಲಕಲ್ಯಾಣಾಧಿಕಾರಿ ಜೆ.ವೈಶಾಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ವಿವಿಧ ‌ ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !