ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಂಪಿಯಲ್ಲಿ ಯೋಗ ದಿನಾಚರಣೆ

ಹೊಸದಿಗಂತ ವರದಿ ಬಳ್ಳಾರಿ:

ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಂಪಿಯಲ್ಲಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಮಾನವತೆಗಾಗಿ ಯೋಗ ಎನ್ನುವ ಘೋಷವಾಕ್ಯದಡಿ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಮಂಗಳವಾರ ಬೆಳಿಗ್ಗೆ ಯೋಗವೇ ಸದ್ದು ಮಾಡಿತು. ಸಚಿವರಾದ ಪ್ರಹ್ಲಾದ್ ಜೋಶಿ, ಆನಂದ್ ಸಿಂಗ್, ಸರ್ಬಾನಂದ ಸೋನೋವಾಲ್, ಸಂಸದ ವೈ.ದೇವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ‌ ಜೊಲ್ಲೆ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಭಂಗಿಯಲ್ಲಿ ಯೋಗಭ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರಿನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಯೋಗ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಯೋಗ ಸಂಭ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಮೋದಿಜೀ ಅವರ ಕಾರ್ಯಕ್ರಮ ವೀಕ್ಷಿಸಲು 16ಕ್ಕೂ ಹೆಚ್ಚು ಎಲ್ಇಡಿ ಪರದೆಗಳ ಮೂಲಕ ವೀಕ್ಷಣೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

79 ದೇಶಗಳಲ್ಲಿ ಯೋಗ ಸದ್ದು:

ಈ ವೇಳೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ ಯೋಗ ಮಹತ್ವ ಅರಿತು ಪ್ರತಿಯೊಬ್ಬರೂ ನಿತ್ಯ ಯೋಗ ಮಾಡಲು ಮುಂದಾಗಬೇಕು, ವಿಶೇಷವಾಗಿ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಲಿದೆ, ನೆನಪಿನ ಶಕ್ತಿ ಹೆಚ್ಚಾಗಲಿದೆ. ವಿಶ್ವ ಸಂಸ್ಥೆ ಒಳಗೊಂಡು 79 ದೇಶಗಳಲ್ಲಿ ಜನರು ಯೋಗ ಮಾಡಲು ಮುಂದಾಗಿದ್ದಾರೆ, ಇಡೀ ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಮಹಾನ್ ಚೇತನ, ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರಿಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸದರೂ ಸಾಲದು ಎಂದು ಬಣ್ಣಿಸಿದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ಯೋಗ ದಿನಾಚರಣೆಯನ್ನು ವಿಶ್ವ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಪುಣ್ಯ ಭೂಮಿಯಲ್ಲಿ ಆಚರಿಸುತ್ತಿರುವುದು ಅತ್ಯಂತ ಸಂತಸ‌ ಮೂಡಿಸಿದೆ. ಯೋಗವನ್ನು ನಿತ್ಯ ಮಾಡುವುದರಿಂದ ಆರೋಗ್ಯಕ್ಕೆ ಹೊಸ ಚೈತನ್ಯ ಮೂಡಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!