Zomato Food Rescue | ಕಡಿಮೆ ಬೆಲೆಗೆ ಸಿಗುತ್ತೆ ಬಿಸಿ ಬಿಸಿ ಆಹಾರ, ಹೇಗೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸದಾ ಹೊಸ ಐಡಿಯಾಗಳನ್ನು ಜಾರಿಗೆ ತರೋ ಝೊಮ್ಯಾಟೊ ಇದೀಗ ಹೊಸ ಫೀಚರ್‌ ಒಂದನ್ನು ಪರಿಚಯಿಸಿದೆ. ಇದರ ಹೆಸರು ಝೊಮ್ಯಾಟೊ ಫುಡ್‌ ರೆಸ್ಕ್ಯೂ. ಇಲ್ಲಿ ಜನ ಆರ್ಡರ್‌ ಮಾಡಿ ನಂತರ ಕ್ಯಾನ್ಸಲ್‌ ಮಾಡಿದ ಊಟವನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ.

ಗ್ರಾಹಕರು ತಮಗೆ ಬೇಕಾದ ಆಹಾರಕ್ಕೆ ಆರ್ಡರ್ ಬುಕ್ ಮಾಡಿ, ಕಾರಣಾಂತರಗಳಿಂದ ಅದನ್ನು ರದ್ದು ಮಾಡುವುದುಂಟು. ಇಂತಹ ಕ್ಯಾನ್ಸಲ್ಡ್ ಆರ್ಡರ್​ಗಳಿಗೆ ರೀಫಂಡ್ ಇರುವುದಿಲ್ಲ. ಪ್ಯಾಕ್ ಆಗಿರುವಂತಹ ಆಹಾರವನ್ನು ರೆಸ್ಟೋರೆಂಟ್​ನವರೂ ಮರಳಿ ಪಡೆಯುವುದಿಲ್ಲ. ಹೀಗಾಗಿ, ಆ ಪ್ಯಾಕ್ ತ್ಯಾಜ್ಯಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಈಗ ಆ ಆಹಾರ ಇನ್ನೂ ತಾಜಾ ಇರುವಾಗಲೇ ಬೇರೆಯವರಿಗೆ ಅದನ್ನು ಮಾರಾಟ ಮಾಡುವುದು ಜೊಮಾಟೊದ ಗುರಿಯಾಗಿದೆ.

‘ಕ್ಯಾನ್ಸಲೇಶನ್ ಮಾಡುವುದರಿಂದ ಸಾಕಷ್ಟು ಆಹಾರವು ಬಳಕೆಯಾಗದೇ ಹಾಳಾಗಿ ಹೋಗುತ್ತದೆ. ಹೀಗಾಗಿ, ಕ್ಯಾನ್ಸಲೇಶನ್ ಅನ್ನು ನಾವು ಉತ್ತೇಜಿಸುವುದಿಲ್ಲ. ಕ್ಯಾನ್ಸಲೇಶನ್​ಗೆ ರೀಫಂಡ್ ಕೂಡ ಮಾಡುವುದಿಲ್ಲ. ಆದರೂ ಕೂಡ ಜೊಮಾಟೊದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಆರ್ಡರ್​ಗಳು ಕ್ಯಾನ್ಸಲ್ ಆಗುತ್ತವೆ,’ ಎಂದು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್ಡರ್ ಕ್ಯಾನ್ಸಲ್ ಆದ ಆಹಾರ ಪ್ಯಾಕೆಟ್​ಗಳು ಮರುಮಾರಾಟವಾದಲ್ಲಿ ಆ ಹೊಸ ಗ್ರಾಹಕರಿಂದ ಪಾವತಿಸಲಾಗುವ ಹಣವನ್ನು ಮೂಲ ಗ್ರಾಹಕ ಮತ್ತು ರೆಸ್ಟೋರೆಂಟ್​ಗಳಿಗೆ ಹಂಚಲಾಗುತ್ತದೆ ಎಂದು ಜೊಮಾಟೊ ಹೇಳಿದೆ. ಉದಾಹರಣೆಗೆ, ಒಂದು ಸಾವಿರ ರೂ ಮೊತ್ತದ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಲಾಯಿತು ಎಂದಿಟ್ಟುಕೊಳ್ಳಿ. ಆ ಪ್ಯಾಕ್ ಅನ್ನು 500 ರೂ ಬೆಲೆಗೆ ಹೊಸ ಗ್ರಾಹಕ ಖರೀದಿಸಿದಾಗ, ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾದ ತೆರಿಗೆ ಇತ್ಯಾದಿಯನ್ನು ಮುರಿದುಕೊಂಡು ಉಳಿಯುವ ಹಣವನ್ನು ಮೂಲ ಗ್ರಾಹಕ ಮತ್ತು ರೆಸ್ಟೋರೆಂಟ್​ಗೆ ಹಂಚಿಕೆ ಮಾಡಲಾಗುತ್ತದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!