ಚಿಕ್ಕೋಡಿಯ ಈ ಆದರ್ಶ ದಂಪತಿಯ ಕಾರ್ಯ ನೀವು ಮೆಚ್ಚಲೇಬೇಕು

ಚಂದ್ರಶೇಖರ ಎಸ್ ಚಿನಕೇಕರ

ದಿಕ್ಕಿಲ್ಲದವರಿಗೆ ದೇವರೇ ಗತಿ ಅನ್ನೋ ಮಾತಿದೆ. ಈ ಮಾತಿನಂತೆಯೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮತ್ತಿವಾಡೆ ಗ್ರಾಮದ ಅಮರ ಪೋವಾರ ಮತ್ತು ಸುಭಾಂಗಿ ಪೋವಾರ ದಂಪತಿ 27ಕ್ಕೂ ಹೆಚ್ಚು ಅನಾಥರು, ವಯೋವೃದ್ಧರಿಗೆ ಆಶ್ರಯ ನೀಡಿದ್ದಾರೆ.

ಸರ್ಕಾರದಿಂದ ಯಾವುದೇ ಸಹಾಯ ಇಲ್ಲದೆ ಕಳೆದ 5-6 ವರ್ಷಗಳಿಂದ ವೃದ್ಧಾಶ್ರಮ ನಡೆಸಿಕೊಂಡು ಬಂದಿದ್ದು, ಇದೀಗ ಇವರ ವೃದ್ಧಾಶ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಹರಿಯಾಣ, ತಮಿಳುನಾಡು ಸೇರಿದಂತೆ ವಿವಿಧೆಡೆಯ ವಯೋವೃದ್ಧರು, ಅನಾಥರು, ಬುದ್ಧಿಮಾಂಧ್ಯರಿಗೆ ಆಶ್ರಯ ಸಿಕ್ಕಿದೆ.

ಭಾರತೀಯ ಸಮಾಜ ಸೇವಾ ಹೆಸರಿನ ಸಂಸ್ಥೆ ಕಟ್ಟಿಕೊಂಡು ಕಳೆದ 6 ವರ್ಷಗಳಿಂದ ತಾವು ವಾಸಿಸುವ ಪುಟ್ಟದಾದ ಜೋಪಡಿಯಂತಿರುವ ಮನೆಯಲ್ಲಿಯೇ ಅಮರ-ಸುಭಾಂಗಿ ದಂಪತಿ ಅನಾಥಾಶ್ರಮ ನಡೆಸಿಕೊಂಡು ಬರುತ್ತಿದ್ದು, ವಯೋವೃದ್ಧರಿಗೆ, ಬುದ್ಧಿಮಾಂಧ್ಯರಿಗೆ ಮೂರು ಹೊತ್ತು ಊಟ, ಚಹಾ, ಆರೋಗ್ಯದ ಕಾಳಜಿ, ಸ್ನಾನ ಮಾಡಿಸುವುದು, ಬಟ್ಟೆ ತೊಡಿಸುವುದು ಸೇರಿದಂತೆ ಎಲ್ಲ ಸೇವೆ ಮಾಡುತ್ತಿದ್ದಾರೆ. ಈ ಕಾಯಕದಲ್ಲೇ ದೇವರನ್ನು ಕಾಣುತ್ತಿದ್ದಾರೆ.

ಅಮರ ಪೋವಾರ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ (ಎಂಎಸ್‌ಡಬ್ಲ್ಯೂ) ಮಾಡಿಕೊಂಡಿದ್ದು, ಮತ್ತಿವಾಡೆ ಗ್ರಾಮದಲ್ಲಿ ತಾವು ವಾಸಿಸುವ ಪುಟ್ಟದಾದ ಮನೆಯಲ್ಲಿಯೇ ವೃದ್ಧಾಶ್ರಮ ತೆರೆದು ಸಮಾಜ ಸೇವೆ ಮಾಡುತ್ತಿದ್ದಾರೆ.

ಹಾದಿ-ಬೀದಿಯಲ್ಲಿ ದಿಕ್ಕಿಲ್ಲದೇ ಅಲೆದಾಡುವವರನ್ನು ರಕ್ಷಿಸಿ ಇಲ್ಲಿಗೆ ತಂದು ಸಾಕಷ್ಟು ಜನರು ಬಿಡುತ್ತಾರೆ. ಇವರ ಆಶ್ರಮಕ್ಕೆ ಆಹಾರ ಧಾನ್ಯ, ಅನಾಥರಿಗೆ ಬಟ್ಟೆ, ಕೆಲವರು ಔಷಧಿ, ಮಾತ್ರೆ, ಅಡುಗೆ ಸಾಮಗ್ರಿಗಳು ಸೇರಿದಂತೆ ಹತ್ತು ಹಲವು ತೆರನಾದ ವಸ್ತುಗಳನ್ನು ನೀಡಿ ಸಾರ್ಥಕತೆ ಮೆರೆದವರ ಸಂಖ್ಯೆ ಸಾಕಷ್ಟು. ಹೀಗೆ ದಾನಿಗಳ ಸಹಾಯದಿಂದ ವೃದ್ಧಾಶ್ರಮ ನಡೆಸುತ್ತಿರುವ ಅಮರ-ಸುಭಾಂಗಿ ದಂಪತಿಗಳು ಸರ್ಕಾರ ತಮಗೆ ಸಹಾಯ ನೀಡಲೀ, ಬಿಡಲಿ…ದಾನಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಅಮರ ಪವಾರ ಹೇಳುತ್ತಾರೆ.

ಅಮರ ಅವರ ಪತ್ನಿ ಸುಭಾಂಗಿ ಕೂಡ ಪತಿಯ ಹೆಗಲಿಗೆ ಹೆಗಲು ಕೊಟ್ಟು ತನ್ನ ಎರಡು ಪುಟ್ಟ ಮಕ್ಕಳನ್ನು ಸಂಬಾಳಿಸುತ್ತಲೇ, ತಮಗೆ ಇರುವ ಚಿಕ್ಕದಾದ ಮನೆಯಲ್ಲಿಯೇ ಮೂರು ಹೊತ್ತು ಅಡುಗೆ ಮಾಡಿ, ಬುದ್ಧಿಮಾಂಧ್ಯ ಹಾಗೂ ವಯೋವೃದ್ಧರನ್ನು ಸಾಕುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!