April 30, 2026
Thursday, April 30, 2026
spot_img

ನೀವು ಕಾನೂನು ತಿದ್ದುಪಡಿ ಮಾಡಿ: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ತಡೆದ ಕೇಂದ್ರಕ್ಕೆ ‘ಸುಪ್ರೀಂ’ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಸಂತ್ರಸ್ತೆಯ 20 ವಾರಗಳಿಗಿಂತ ಹೆಚ್ಚಿನ ಗರ್ಭಧಾರಣೆಯ ಮಿತಿಯನ್ನು ಅಂತ್ಯಗೊಳಿಸಲು ಕಾನೂನು ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ.

15 ವರ್ಷದ ಸಂತ್ರಸ್ತೆಗೆ 31 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ್ದ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಸಮಯ ಮಿತಿ ಇರಬಾರದು ಮತ್ತು ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಕಾನೂನು ಎಂಬುದು ಸಮಾಜದ ಬೆಳವಣಿಗೆಗೆ ತಕ್ಕಂತೆ ಬದಲಾಗುತ್ತಿರಬೇಕು ಮತ್ತು ಜೀವಂತವಾಗಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸಂತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬದ ನಿರ್ಧಾರಕ್ಕೆ ಸರ್ಕಾರ ಬೆಲೆ ಕೊಡಬೇಕು .ಇಂದು ಗರ್ಭಪಾತವನ್ನು ಅನುಮತಿಸದಿದ್ದರೆ ಸಂತ್ರಸ್ತೆ ಜೀವನಪರ್ಯಂತ ಮಾನಸಿಕ ಆಘಾತವನ್ನು ಅನುಭವಿಸಬೇಕಾಗುತ್ತದೆ. ಇಲ್ಲಿ ತಾಯಿಗೆ ಯಾವುದೇ ರೀತಿಯ ಶಾಶ್ವತ ದೈಹಿಕ ಹಾನಿಯಾಗದಿದ್ದರೆ, ಗರ್ಭಪಾತ ಮಾಡಿದರೆ ಸೂಕ್ತ ಎಂದು ತಿಳಿಸಿದೆ.

ಕೇಂದ್ರ ಸರಕಾರವು, ಗರ್ಭಧಾರಣೆಯಾದಾಗ ಗರ್ಭಪಾತಕ್ಕೆ ಸಮಯದ ಮಿತಿ ನೋಡದೆ ಸೂಕ್ತ ಕಾನೂನನ್ನು ತಿದ್ದುಪಡಿ ಮಾಡಬೇಕು. ಇಂತಹ ಪ್ರಕರಣದ ವಿಚಾರಣೆಗಳು ಕೂಡ ಒಂದು ವಾರದೊಳಗೆ ಪೂರ್ಣಗೊಳ್ಳುವಂತೆ ತಿದ್ದುಪಡಿಯಾಗಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇಂತಹ ಕ್ಷಣದಲ್ಲಿ ಆಕೆಯನ್ನು ಬಲವಂತವಾಗಿ ತಾಯ್ತನಕ್ಕೆ ಒತ್ತಾಯಿಸುವುದು ಆಕೆಯ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ಆಕೆ ಈಗ ಓದುತ್ತಿರಬೇಕು, ಆದರೆ, ನಾವು ಅವಳನ್ನು ತಾಯಿಯಾಗುವಂತೆ ಒತ್ತಾಯಿಸುತ್ತಿದ್ದೇವೆ. ಹೀಗಾಗಿ ಅನಗತ್ಯ ಗರ್ಭಧಾರಣೆಯನ್ನು ವ್ಯಕ್ತಿಯ ಮೇಲೆ ಹೇರಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಅಂತಿಮ ಆಯ್ಕೆಯು ಸಂತ್ರಸ್ತೆಯ ಮೇಲೆ ಇರಬೇಕು ಎಂದು ತಿಳಿಸಿದೆ.

ಏಮ್ಸ್ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ವಾದ ಮಂಡಿಸಿ, 30 ವಾರಗಳ ಗರ್ಭಧಾರಣೆಯಲ್ಲಿ ಭ್ರೂಣವು ಜೀವಂತವಾಗಿರುವುದರಿಂದ ಅಪಾಯಗಳು ಹೆಚ್ಚಾಗುತ್ತವೆ ಎಂದು ವಾದಿಸಿದರು. ಇದರಿಂದ ತಾಯಿ ಆರೋಗ್ಯಕ್ಕೂ ಹಾನಿ ಸಂಭವಿಸಬಹುದು ಎಂದು ಕೋರ್ಟ್ ಗೆ ತಿಳಿಸಿದರು.

ಈ ವೇಳೆ ಕೋರ್ಟ್, ಏಮ್ಸ್’ಗೆ ಕುಟುಂಬಕ್ಕೆ ಸೂಕ್ತ ಕೌನ್ಸೆಲಿಂಗ್ ನೀಡುವಂತೆ ಸೂಚಿಸಿತು. ಅಪ್ರಾಪ್ತೆ ಮತ್ತು ಆಕೆಯ ಕುಟುಂಬವು ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳಲು ಅಗತ್ಯ ಸಹಾಯ ಮತ್ತು ರಕ್ಷಣೆ ಸಿಗಬೇಕು ಎಂದು ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ಮುಂದೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !