ಮೇಘನಾ ಶೆಟ್ಟಿ, ಶಿವಮೊಗ್ಗ
ದಿನವೂ ಒಂದೇ ಸಮಯಕ್ಕೆ ಬರುವ ʼನಿಮ್ಮ ಮನೆಯ ಮುಂದೆ ಬರ್ತೀವಿ ನೋಡಿʼ ಎನ್ನುವ ಕಸದ ಗಾಡಿಯ ಹಾಡು ಇಂದು ನಿಮ್ಮನ್ನು ಎಬ್ಬಿಸಲೇ ಇಲ್ಲ ಎಂದುಕೊಳ್ಳಿ. ಮನೆಯ ಹೊರಾಂಗಣದಲ್ಲೇ ಕಸವನ್ನು ಪ್ಯಾಕ್ ಮಾಡಿ ಇಟ್ಟಿದ್ರೂ ಎದ್ದು ಹೋಗಿ ಕೊಡೋದಕ್ಕೆ ಆಗಿಲ್ಲ. ಮನೆಯ ಹೊರಗೆ ಗಬ್ಬು ವಾಸನೆ ಬರ್ತಾ ಇದೆ ಎಂದು ಮನೆಯವರೆಲ್ಲ ನೂರು ಬಾರಿ ಹೇಳಿರುತ್ತಾರೆ.

ಗಡಿಬಿಡಿಯಲ್ಲಿ ಸ್ನಾನ ಮಾಡಿ, ತಿಂಡಿ ಮಾಡಿ, ಆಫೀಸ್‌ಗೆ ಹೊರಡುವಾಗ ಕಸವನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯೋ ಇಲ್ಲವೋ ಖಾಲಿ ಸೈಟ್‌ನಲ್ಲಿ ಎಸೆದು ಬಿಡ್ತೀರಿ ಎಂದುಕೊಳ್ಳಿ. ಎಸೆಯುವ ಮುನ್ನ ನಾನು ಮಾಡ್ತಿರೋದು ತಪ್ಪು ಎಂದು ಗೊತ್ತಾಗಿರುತ್ತದೆ. ಆದರೆ ಒಂದೇ ಒಂದು ಬಾರಿ ತಾನೇ ಮತ್ತೆ ಹೀಗಾಗೋದಿಲ್ಲ ಎಂದು ನಿಮ್ಮನ್ನು ನೀವೇ ಸಮಾಧಾನಿಸಿಕೊಂಡು ಕಣ್ಮುಚ್ಚಿ ಕಸ ಸುರಿದುಬಿಡ್ತೀರಿ. ನಿಮ್ಮ ಮನೆಯೆಲ್ಲಾ ಕಸ ಇಲ್ಲದೆ ಕ್ಲೀನ್ ಆಗಿ ಹೋಯ್ತು. ನೆಕ್ಸ್ಟ್‌ಟೈಮ್‌ನಿಂದ ಸರಿಯಾಗಿ ಎದ್ದು ಕಸದ ಗಾಡಿಗೇ ಕಸ ಹಾಕಬೇಕು ಎಂದುಕೊಂಡ್ರೆ ಮುಗೀತು. ಇನ್ನು ರಸ್ತೆ ಬದಿ ಕಸ ಹಾಕಿದ್ದರ ಬಗ್ಗೆ ದಿನವಿಡೀ ಯೋಚನೆ ಬರೋದೇ ಇಲ್ಲ! ಬಟ್ ನಿಮ್ಮಂತೆಯೇ ʼಒಂದೇ ಒಂದು ದಿನʼ ಅಂತ ಕಸ ಹಾಕೋ ಕೋಟ್ಯಂತರ ಮಂದಿ ಇದ್ದಾರೆ! ಮನೆಗೊಂದು ಬಕೆಟ್ ಕಸ ಅಂದ್ರೂ ಭೂಮಿ ಒಡಲಿಗೆ ಎಷ್ಟಾಯ್ತು??

ಶರ್ಟ್‌ನ ಒಂದು ಬಟನ್ ತಪ್ಪಾದ್ರೆ ಹೇಗೆ ಎಲ್ಲ ಬಟನ್‌ಗಳು ತಪ್ಪಾಗುತ್ತದೆಯೋ ಅದೇ ರೀತಿ ನಾವು ಒಂದು ದಿನ ಹಾಕುವ ಕಸಕ್ಕೆ ಚೈನ್ ರಿಯಾಕ್ಷನ್ ಇದೆ. ಇದನ್ನು ನಾವು ಯೋಚಿಸೋದಿಲ್ಲ ಅಷ್ಟೆ. ಗೋಡೆಗಳ ಮೇಲೆ ಇಲ್ಲ ʼಕಸ ಹಾಕಿದವರು ನಾಯಿಗೆ ಸಮಾನರುʼ ಎಂದೋ, ಕಸ ಹಾಕಬಾರದೆಂದು ದೇವರ ಫೋಟೊ ಕೂಡ ಇಟ್ಟಿರುತ್ತಾರೆ. ಆದರೆ ಕಸ ಹಾಕಿ ಬಂದು, ದೇವರ ಫೋಟೊದಿಂದ ದೂರ ಹಾಕಿದ್ದೀವಿ ಎಂದು ಸಮಾಧಾನಿಸಿಕೊಳ್ತೀರಿ. ಕಸ ಹಾಕೋದು ಅಂದ್ರೆ ಮನೆಯಿಂದ ತಂದ ದೊಡ್ಡ ಕವರ್‌ನ ಹೊಲಸು ಅಷ್ಟೇ ಅಲ್ಲ. ಕಾಫಿ ಕುಡಿದು ಎಲ್ಲೆಂದರಲ್ಲಿ ಎಸೆದ ಪೇಪರ್ ಕಪ್, ಚೂಯಿಂಗ್ ಅಗಿಯಲು ತೆಗೆದ ಕವರ್ ಕೂಡ ಕಸವೇ.

ನೀವು ಎಸೆದ ಕಸದ ರಿಯಾಲಿಟಿ ಏನು?
ಪ್ರತೀ ಪ್ಲಾಸ್ಟಿಕ್ ಪೀಸ್ ಡೀಕಂಪೋಸ್ ಆಗೋದಕ್ಕೆ ನೂರು ವರ್ಷಗಳು ಬೇಕಾಗುತ್ತದೆ. ನೀವು ಈಗ ಎಸೆದ ಬಿಸ್ಕೆಟ್ ಕವರ್ ನಿಮ್ಮ ಮರಿಮೊಮ್ಮಕ್ಕಳ ಕಾಲಕ್ಕೆ ಕರಗುತ್ತದೆ! ಅರ್ಥ ಆಯ್ತಾ? ಭಾರತದಲ್ಲಿ ಪ್ರತೀ ವರ್ಷ 62 ಮಿಲಿಯನ್ ಟನ್‌ನಷ್ಟು ಕಸ ಉತ್ಪತ್ತಿಯಾಗುತ್ತದೆ. ಹಸಿ ಕಸ, ಒಣ ಕಸ, ಮೆಡಿಕಲ್ ವೇಸ್ಟ್, ಬಯೋ ವೇಸ್ಟ್ ಏನನ್ನೂ ಸಪರೇಟ್ ಮಾಡದೇ ಒಂದೇ ಕವರ್‌ಗೆ ಕಸ ಹಾಕಿ ಎಸೆಯುವ ಮುನ್ನ ಒಮ್ಮೆ ಯೋಚಿಸಿ. ಭಾರತದಲ್ಲಿರುವ ಕಸದಲ್ಲಿ ಶೇ. 40ರಷ್ಟು ಪ್ಲಾಸ್ಟಿಕ್ ವೇಸ್ಟ್ ರಸ್ತೆ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಇದೆ.

ಅರ್ಥಮಾಡಿಕೊಂಡ್ರೆ ಎಲ್ಲವೂ ಸಿಂಪಲ್
ನೀರು ಕಟ್ಟಿದೆ, ಮಳೆಗಾಲದಲ್ಲಿ ನೀರು ನಿಂತುಹೋಗಿ ಇಡೀ ಏರಿಯಾ ಗಬ್ಬು ನಾರುತ್ತಿದೆ ಅನ್ನೋ ದೂರುಗಳನ್ನು ದಾಖಲಿಸ್ತೀರಿ. ಇದಕ್ಕೆಲ್ಲಾ ಕಾರಣ ಎಲ್ಲಿ ಬೇಕಲ್ಲಿ ಎಸೆದ ಕಸ. ಪೈಪ್‌ಗಳಲ್ಲಿ ಸಿಕ್ಕಿಹಾಕಿಕೊಂಡು ನಗರವನ್ನು ಕಲುಷಿತವನ್ನಾಗಿ ಮಾಡುತ್ತದೆ.

ಬೀದಿಯಲ್ಲಿ ಬಿದ್ದಿರೋ ಕಸ ಸೊಳ್ಳೆ, ಹುಳಗಳನ್ನು ಕೈ ಬೀಸಿ ಕರೆಯುತ್ತದೆ. ಇದರಿಂದಾಗಿ ನಿಮ್ಮ ಏರಿಯಾದಲ್ಲಿ ಸೊಳ್ಳೆಯ ಸಮಸ್ಯೆ ಹೆಚ್ಚಾಗುತ್ತದೆ. ಅದಷ್ಟೇ ಅಲ್ಲ, ಡೆಂಗ್ಯೂ, ಮಲೇರಿಯಾ, ಕಾಲೆರಾ, ಟೈಫಾಯ್ಡ್ ತಗುಲುತ್ತದೆ. ನಿಮ್ಮ ಮಕ್ಕಳು ಈ ರೀತಿಯ ಜಾಗದಲ್ಲಿ ಓಡಾಡದೇ ಇರಬಹುದು. ಆದರೆ ಸ್ಲಮ್ ಮಕ್ಕಳು ಕೂಡ ಮಕ್ಕಳೇ ಅಲ್ವಾ?

ನಾಲ್ಕು ವರ್ಷದ ಹಿಂದೆ ಗರ್ಭಿಣಿ ಹಸುವೊಂದು ಹೊಟ್ಟೆ ನೋವಿನಿಂದ ಒದ್ದಾಡಿತ್ತು. ಅದರ ಹೊಟ್ಟೆಯಲ್ಲಿ ಬರೋಬ್ಬರಿ ೭೧ ಕೆಜಿಯಷ್ಟು ಪ್ಲಾಸ್ಟಿಕ್ ಇತ್ತು. ಹಸು ಹಾಗೂ ಅದರ ಕಂದ ಅಲ್ಲೇ ಪ್ರಾಣಬಿಟ್ಟರು. ಇದಕ್ಕೆಲ್ಲಾ ಯಾರು ಕಾರಣ?

ಕಸ ನೀವು ಹಾಕಿದ್ರೂ, ನಿಮ್ಮ ಪಕ್ಕದ ಮನೆಯವರು ಹಾಕಿದ್ರೂ ಇಬ್ಬರೂ ಉಸಿರಾಡೋ ಗಾಳಿ ಕಲುಷಿತವಾಗುತ್ತದೆ. ಅವರು ಮಾಡ್ತಾರೆ ಎಂದು ನೀವು ಸೇಫ್ ಆಗೋಕೆ ಸಾಧ್ಯವಿಲ್ಲ. ಕಸದ ರಾಶಿಯನ್ನು ನೋಡಲಾಗದೇ ಅದಕ್ಕೆ ಬೆಂಕಿ ಇಡುತ್ತೀರಿ. ಪ್ಲಾಸ್ಟಿಕ್‌ನಿಂದ ಹೊರಕ್ಕೆ ಬರುವ ಕೆಮಿಕಲ್‌ಗಳು ನಿಮಗೆ ಅಸ್ತಮಾ, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹಾಗೂ ಕ್ಯಾನ್ಸರ್ ಕೂಡ ಕೊಡಬಹುದು ಜಾಗ್ರತೆ!

ನಾವು ರಸ್ತೆ ಬದಿ ಕಸ ಹಾಕಿದ್ವಿ, ಮಳೆ ಬಂತು, ಕಸ ಹೋಯ್ತು ಅಂದ್ಕೋಬೇಡಿ. ಮಳೆಯ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್, ಹೆವಿ ಮೆಟಲ್ಸ್ ಹಾಗೂ ಕೆಟ್ಟ ಕೆಮಿಕಲ್ಸ್ ಇರುತ್ತದೆ. ನೀರು ಹರಿದು ಕೆರೆ, ನದಿಗೆ ಸೇರುತ್ತದೆ. ಆ ನೀರಿನಲ್ಲೇ ತಾನೆ ನೀವು ಬ್ರಶ್ ಮಾಡೋದು? ಕುಡಿಯೋದು?

ಇದ್ಯಾವುದನ್ನೂ ನಿಮಗೆ ಹೆದರಿಸೋಕೆ ಹೇಳ್ತಾ ಇಲ್ಲ. ಇದು ನಮ್ಮ ರಿಯಾಲಿಟಿ, ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗಾಗಿ ಆಸ್ತಿ ಮಾಡೋದು ಮುಖ್ಯ ಅಲ್ಲ. ನೀವು ಸಿವಿಕ್ ಸೆನ್ಸ್ ಕಲಿತು, ಮಕ್ಕಳಿಗೂ ಹೇಳಿಕೊಟ್ಟು, ಅವರು ಬದುಕಿರೋದಕ್ಕೆ ಒಂದೊಳ್ಳೆ ವಾತಾವರಣ ಕ್ರಿಯೇಟ್ ಮಾಡಬೇಕು. ಇದು ನಿಮ್ಮಿಂದ ಮಾತ್ರ ಸಾಧ್ಯ! ಇಂದಿನಿಂದಲೇ ಏನಾದ್ರೂ ಬದಲಾವಣೆಯತ್ತ ಮನಸ್ಸು ಮಾಡ್ತೀರಾ?



